ಬೆಂಗಳೂರು : ವಯೋವೃದ್ಧ ಅತ್ತೆ ಮಾವನ ಮೇಲೆ ಅಮಾನಮೀಯವಾಗಿ ಹಲ್ಲೆ ಮಾಡಿ, ಮಕ್ಕಳ ಜೊತೆಗೂಡಿ ಕಿರುಕುಳ ಕೊಟ್ಟಿದ್ದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆಗೆ ವಿರುದ್ಧ ವೈದ್ಯಕೀಯ ಶಿಕ್ಷಣ ಇಲಾಖೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದು ಕೂಡಲೇ ಇದಕ್ಕೆ ಉತ್ತರ ನೀಡಬೇಕೆಂದು ಸೂಚನೆ ನೀಡಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆ ಡಾ. ಪ್ರಿಯದರ್ಶಿನಿ ಅವರಿಗೆ ಲಿಖಿತ ಸಮಾಜಾಯಿಷಿ ನೀಡಲು ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ. ಪ್ರಿಯದರ್ಶಿನಿ ಎನ್. ಇತ್ತೀಚೆಗೆ ತಮ್ಮ ಮಕ್ಕಳ ಜೊತೆಗೂಡಿ ವಯೋವೃದ್ಧ ಅತ್ತೆ, ಮಾವಂದಿರನ್ನು ಥಳಿಸಿದ ವೀಡಿಯೋ ಭಾರಿ ವೈರಲ್ ಆಗಿತ್ತು. ಕಳೆದ ಹತ್ತು ವರ್ಷದಿಂದಲೂ ಡಾ. ಪ್ರಿಯದರ್ಶಿನಿ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಿಯದರ್ಶಿನಿ ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೂ ಅತ್ತೆ ಮಾವನ ಮನೆಗೆ ತೆರಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್, ಇದು ಇಲಾಖೆಗೆ ತೀವ್ರ ಮುಜುಗರ ತರುವ ವಿಷಯವಾಗಿದ್ದು, ಕೂಡಲೇ ವೈದ್ಯೆ ಪ್ರಿಯದರ್ಶಿನಿಗೆ ಷೋಕಾಸ್ ನೋಟಿಸ್ ನೀಡಿ, ವಿವರಣೆ ಪಡೆಯಿರಿ ಎಂದು ಸೂಚಿಸಿದರು. ಇದರ ಬೆನ್ನಲ್ಲೇ ಈಗ ಡಿಎಂಇ ಡಾ. ಸುಜಾತಾ ರಾಥೋಡ್ ನೋಟಿಸ್ ಜಾರಿ ಮಾಡಿದ್ದಾರೆ.
ವೃದ್ಧ ಅತ್ತೆ-ಮಾವಂದಿರ ಮೇಲೆ ನಡೆದಿರುವ ಹಲ್ಲೆ ವೀಡಿಯೋ ಮೇರೆಗೆ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವರ್ತನೆಯು ಸರ್ಕಾರಿ ವೈದ್ಯಾಧಿಕಾರಿಗೆ ತರವಲ್ಲದ್ದಾಗಿದೆ. ಆದ್ದರಿಂದ ಪ್ರಕರಣದ ಕುರಿತು ಲಿಖಿತ ಸಮಜಾಯಿಷಿ ನೀಡಲು ನೋಟಿಸ್ ಜಾರಿ ನೀಡಲಾಗಿದೆ. ತಪ್ಪಿದ್ದಲ್ಲಿ ಮುಂದಿನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮೊಹಮದ್ ಮೋಶಿನ್ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಆಸ್ಪತ್ರೆಗಳಲ್ಲಿ ವಯೋವೃದ್ಧ ಪೋಷಕರನ್ನು ಬಿಟ್ಟು ಹೋಗುತ್ತಿರುವ, ಆಸ್ತಿ ಬರೆಯಿಸಿಕೊಂಡು ಇಲ್ಲಿಗೆ ತಂದು ಬಿಡುತ್ತಿದ್ದ ಪ್ರಕರಣಗಳ ಕುರಿತು ಸಚಿವರ ಗಮನಕ್ಕೆ ತಂದಿದ್ದ ಪ್ರಧಾನ ಕಾರ್ಯದರ್ಶಿಗಳು, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವ ಕುರಿತು ಕೆಲವು ಶಿಫಾರಸುಗಳುನ್ನು ನೀಡಿದ್ದರು.
ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಆಸ್ಪತ್ರೆಗಳಲ್ಲಿ ಗುಣಮಟ್ಟ ಹಾಗೂ ಸುಧಾರಣೆ ತರಲು ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಸದಾ ಬದ್ಧರಾಗಿದ್ದಾರೆ.
SHOCKING NEWS: ತಲೆಯಲ್ಲಿ ಕೂದಲಿಲ್ಲವೆಂದು ಪತ್ನಿ ಕಿರುಕುಳ: ಡೆತ್ ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ
SHOCKING : ರಾಜ್ಯದಲ್ಲಿ ಅಮಾನವೀಯ ಘಟನೆ : ಕಲ್ಬುರ್ಗಿಯಲ್ಲಿ ‘ಮಂಗಳಮುಖಿಯನ್ನು’ ಬೆತ್ತಲೆಗೊಳಿಸಿ, ತಲೆ ಬೋಳಿಸಿ ಹಲ್ಲೆ!