ನವದೆಹಲಿ: ಗಣರಾಜ್ಯೋತ್ಸವದ ಮುನ್ನಾದಿನವಾದ ಶನಿವಾರ ಕೇಂದ್ರ ಸರ್ಕಾರ 2025 ರ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಕರ್ನಾಟಕದ ವೆಂಕಪ್ಪ ಅಂಬಾಜಿ, ಭೀಮವ್ವ, ವಿಜಯ ಲಕ್ಷ್ಮೀ ದೇಶಮಾನಿ ಅವರು ಪಾತ್ರರಾಗಿದ್ದಾರೆ.
ಗಣರಾಜ್ಯೋತ್ಸವದಂದು ಪದ್ಮಶ್ರೀ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತಿದೆ. ಇಂದು 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಘೋಷಣೆ ಮಾಡಿದ್ದಾರೆ. ಈ ಬಾರಿ ಕರ್ನಾಟಕದ ಮೂವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.
ಹೀಗಿದೆ 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪಡೆದ ಕರ್ನಾಟಕ ಮೂವರು ಸಾಧಕರ ಪರಿಚಯ
ವೆಂಕಪ್ಪ ಸಂಬಾಜಿ ಸುಗತೇಕರ್
ಇವರು ಎಂದಿಗೂ ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡದೇ ಇದ್ದರೂ, ಸಾವಿರಕ್ಕೂ ಅಧಿಕ ತತ್ವಪದ, ದೇವಿ ಪದ ಹಾಗೂ ಇತರ ವಿಷಯಗಳ ಮೇಲೆ ಪದಗಳನ್ನು ಹಾಡಿ ಕಟ್ಟಿದಂತ ಜಾನಪದ ಗಾಯಕರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 110ನೇ ಮನ್ ಕೀ ಬಾತ್ ರೇಡಿಯೋ ಸರಣಿಯಲ್ಲೂ ಕರ್ನಾಟಕದ ವೆಂಕಪ್ಪ ಸಂಬಾಜಿ ಸುಗತೇಕರ್ ಅವರ ಗುಣಗಾನ ಮಾಡಿದ್ದರು. ಕರ್ನಾಟಕದ ಬಾಗಲಕೋಟೆ ನಿವಾಸಿಯಾದ ವೆಂಕಪ್ಪ ಅಂಬಾಜಿ ಸುಗತೇಕರ್ ಅವರು ಸಾವಿರಕ್ಕೂ ಅಧಿಕ ಜನಪದ ಅಂದರೆ ಗೊಂದಲಿ ಹಾಡುಗಳನ್ನು ಹಾಡಿ ಜನಪ್ರಿಯರಾಗಿದ್ದಾರೆ.
ಇಷ್ಟೇ ಅಲ್ಲದೇ ಯಾವುದೇ ಸಂಭಾವನೆ ಪಡೆಯದೇ ಸಾವಿರಾರು ಜನರಿಗೆ ಅವರು ಗೊಂದಲಿ ಹಾಡುವುದನ್ನು ಕಲಿಸಿದ್ದಾರೆ. 81 ವರ್ಷದ ವೆಂಕಪ್ಪ ಅಂಬಾಜಿ, ಕಳೆದ 71 ವರ್ಷಗಳಿಂದ ಪದ ಹಾಡುತ್ತಿದ್ದಾರೆ. 150ಕ್ಕೂ ಹೆಚ್ಚು ಕಥೆ ಹೇಳುವ ಸಾವಿರಕ್ಕೂ ಅಧಿಕ ಗೊಂದಲಿ ಹಾಡು ಹಾಡಿದ್ದಾರ. ಕರ್ನಾಟಕ ಸರ್ಕಾರ 2022ರಲ್ಲಿ ಗೊಂದಲಿ ಪದ ಸೇವೆಗೆ ಜನಪದ ವಿವಿಯಿಂದ ಗೌರವ ಡಾಕ್ಟರೇಟ್ ಕೂಡ ಪ್ರದಾನ ಮಾಡಲಾಗಿತ್ತು. ರಾಜ್ಯ ಸರಕಾರದಿಂದ ಈ ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ವೆಂಕಪ್ಪ ಅವರ ಗೊಂದಲಿಗರ ಹಾಡಿಗೆ ಅರಸಿ ಬಂದಿವೆ.
ಭೀಮವ್ವ ಶಿಳ್ಳೇಕ್ಯಾತ
ಇವರು ಕೊಪ್ಪಳದ ಸಾಂಪ್ರದಾಯಿಕ ಶಿಳ್ಳೇಕ್ಯಾತರ ಕುಟುಂಬದವರಾಗಿದ್ದು ತೊಗಲುಗೊಂಬೆ ಕಲಾವಿದ. 25 ವರ್ಷಗಳಿಂದ ತೊಗಲುಗೊಂಬೆ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪರದೆಯ ಹಿಂದೆ ಮಹಿಳಾ ಪಾತ್ರಗಳಿಗೆ ಧ್ವನಿ ತುಂಬುವ ಅಪರೂಪದ ಕಲಾವಿದೆಯಾದ ಭೀಮವ್ವ ದೊಡ್ಡಬಾಳಪ್ಪ ಅವರು ದೇಶ ವಿದೇಶಗಳಲ್ಲೂ ತಮ್ಮ ವೈವಿಧ್ಯಮಯ ತೊಗಲು ಗೊಂಬೆಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.
ಇಳಿ ವಯಸ್ಸಿನಲ್ಲಿಯೂ ತೊಗಲುಗೊಂಬೆಯಾಟವನ್ನು ಮನಮುಟ್ಟುವಂತೆ ಪ್ರದರ್ಶಿಸುವ ಭೀಮವ್ವ ಅಮೇರಿಕ, ಇರಾನ್, ಸ್ವಿಡರ್‌ಲ್ಯಾಂಡ್ ಮೊದಲಾದ ಭಾರತದ ಪುರಾತನ ಕಲೆಯಾದ ತೊಗಲುಗೊಂಬೆಯಾಟವನ್ನು ಪ್ರದರ್ಶಿಸುವ ತಂಡಗಳಲ್ಲಿ ಪ್ರಮುಖ ಸದಸ್ಯೆ. ಭೀಮವ್ವ ತನ್ನ ಮಾತಿನ ಚಾಕಚಕ್ಯತೆಯಿಂದ ಹಾಗೂ ಸಮಯೋಚಿತ ಸಂಭಾಷಣೆಯಿಂದ ಪ್ರೇಕ್ಷಕರನ್ನು ಸೆಳೆದಿದ್ದಾರೆ.
ವಿಜಯಲಕ್ಷ್ಮೀ ದೇಶಮಾನೆ
ಸುಮಾರು ಎರಡು ದಶಕಗಳಿಂದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳ ಆಶಾಕಿರಣವಾಗಿ, ಅವರ ನೋವಿನ ಉಪಶಮನಕ್ಕಾಗಿ ಹಾಗೂ ರೋಗನಿವಾರಣೆಗಾಗಿ ಶ್ರಮಿಸುತ್ತಿರುವವರು ಡಾ. ವಿಜಯಲಕ್ಷ್ಮಿ ದೇಶಮಾನೆ.
ಗುಲ್ಬರ್ಗಾ ಜಿಲ್ಲೆಯಲ್ಲಿ ಜನಿಸಿದ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಎಂ.ಬಿ.ಬಿ.ಎಸ್, ಎಂ.ಎಸ್. (ಜನರಲ್ ಸರ್ಜರಿ). ಎಫ್.ಎ.ಐ.ಎಸ್. ಪದವಿ ಪಡೆದು ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯಲ್ಲಿ ಸರ್ಜರಿಯ ಪ್ರಾಧ್ಯಾಪಕರಾಗಿದ್ದಾರೆ.
ಅಮೆರಿಕ, ಸ್ವೀಡನ್, ಮುಂಬೈ, ಕೊಲಂಬೋಗಳಿಗೆ ಪ್ರತಿನಿಧಿಯಾಗಿ ಭೇಟಿ ನೀಡಿರುವ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ವಿವಿಧ ಪತ್ರಿಕೆಗಳಲ್ಲಿ ಕ್ಯಾನ್ಸರ್ ಕುರಿತು ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ.
ವಿಜಯಲಕ್ಷ್ಮಿ ದೇಶಮಾನೆ ಅವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಹಲವು ಸಂಸ್ಥೆಗಳು ಕಲಶ ಪ್ರಶಸ್ತಿ, ರಾಷ್ಟ್ರೀಯ ರತ್ನ, ಮೆಡಿಕಲ್ ಎಕ್ಸಲೆನ್ಸ್ ಪ್ರಶಸ್ತಿ, ಶಿರೋಮಣಿ ಪ್ರಶಸ್ತಿ, 1999ರ ವರ್ಷದ ಮಹಿಳಾ ಪ್ರಶಸ್ತಿಯನ್ನು ಇತ್ತು ಗೌರವಿಸಿವೆ.
ಇಂಟರ್ನ್ಯಾಷನಲ್ ಸ್ಟಡಿ ಸರ್ಕಲ್ 2003 ಹಾಗೂ 2004ರಲ್ಲಿ ಚಿನ್ನದ ಪದಕ ನೀಡಿ ಗೌರವಿಸಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದು, ಕ್ಯಾನ್ಸರ್ ರೋಗಕ್ಕೆ ತುತ್ತಾದ ದುರ್ದೈವಿಗಳ ಸೇವೆಗಾಗಿ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ.
7 ಲಕ್ಷದ 80 ಸಾವಿರ ದೂರುಗಳು ಬರುವವರೆಗೂ ಬಾಳೆಹಣ್ಣು ತಿನ್ನುತ್ತಾ ಇದ್ರಾ?: MLC ರವಿಕುಮಾರ್ ಪ್ರಶ್ನೆ