ಬೆಂಗಳೂರು : ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂಬಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 1ರಿಂದ 10ನೇ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಸಿದ್ದತೆ ನಡೆದಿದೆ. ಈ ಸಂಬಂಧ 10 ಚಟುವಟಿಕಾ ಪುಸ್ತಕ ರಚಿಸಿದ್ದು, ಸಿಎಂ ಸಿದ್ದರಾಮಯ್ಯ ಕನ್ನಡ ರಾಜ್ಯೋತ್ಸವದ ದಿನ ಬಿಡುಗಡೆ ಮಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಅನುಭೂತಿ ಮತ್ತು ಪ್ರಾಮಾಣಿಕತೆ ಮತ್ತು ಬದ್ಧತೆ, ಸುಸ್ಥಿರ ಜೀವನ ಮತ್ತು ಪರಿಸರ ಜಾಗೃತಿ, ನಾಗರಿಕ ಜವಾಬ್ದಾರಿ, ವೈವಿಧ್ಯತೆ, ಸಮತೆ ಮತ್ತು ಒಳಗೊಳ್ಳುವಿಕೆ, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಸ್ಥಿತಿಸ್ಥಾಪಕತ್ವ, ವೈಜ್ಞಾನಿಕ ಮನೋ ಭಾವ ಮತ್ತು ಸೃಜನಶೀಲ ಕಲ್ಪನೆ, ಸುರಕ್ಷತೆ ಮತ್ತು ಲಿಂಗ ಸಮಾನತೆ ಈ 10 ಮೂಲ ಮೌಲ್ಯಗಳು ಮತ್ತು ಇತರೆ ಉಪ ಮೌಲ್ಯಗಳನ್ನು ಆಧರಿಸಿದ ಚಟುವಟಿಕಾ ಪುಸ್ತಕಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್ಇಆರ್ಟಿ) ರಚಿಸಿದೆ.
ಇವುಗಳ ಡಿಜಿಟಲ್ ಅವತರಣಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡು ಗಡೆ ಮಾಡಲಿದ್ದಾರೆ. ವಾರದಲ್ಲಿ ಒಂದು ಅಥವಾ ಎರಡು ಗಂಟೆ ಮೌಲ್ಯ ಶಿಕ್ಷಣ ಬೋಧನೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳೆಸುವ ಸಂಬಂಧ 1 ರಿಂದ 10ನೇ ತರಗತಿಯವರೆಗೆ ಪ್ರತ್ಯೇಕವಾಗಿ ಮೌಲ್ಯ ಶಿಕ್ಷಣವನ್ನು ಅಳವಡಿಸಲು 10 ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(DSERT) ವತಿಯಿಂದ ರಚಿಸಲಾಗಿದೆ.