ಬೆಂಗಳೂರು: ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಈ ಸರಕಾರದ ಒಬ್ಬ ಸಚಿವರು, ಒಬ್ಬ ಶಾಸಕ, ಮುಖ್ಯಮಂತ್ರಿ ಸೇರಿ ಹಲವಾರು ಸಚಿವರು ಲೂಟಿ ಮಾಡಿ ಲೋಕಸಭಾ ಚುನಾವಣೆಗೆ ಬಳಸಿದ್ದು, ಅದು ಇ.ಡಿ. ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿದೆ. ಲೂಟಿ ಆದ ಹಣ ಎಲ್ಲೆಲ್ಲಿ ಹೋಗಿದೆ? ಯಾವಾಗ ವಾಪಸ್ ತರುತ್ತೀರಿ ಎಂದು ನಾವು ನಿಲುವಳಿ ಸೂಚನೆ ಮೂಲಕ ಪ್ರಶ್ನಿಸಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.
ಹಣ ಎಟಿಎಂ ಮೂಲಕ ಕಾಂಗ್ರೆಸ್ ನಾಯಕರಿಗೆ ಹೋಗಿದೆಯೇ? ಎಂದು ಕೇಳಿದ ಅವರು, ಎಫ್‍ಐಆರ್‍ನಲ್ಲಿ ನಾಗೇಂದ್ರ, ನಿಗಮದ ಅಧ್ಯಕ್ಷ, ಶಾಸಕ ದದ್ದಲ್ ಹೆಸರಿಲ್ಲ. ಒತ್ತಡ ಹಾಕಿ ಅವರ ಹೆಸರನ್ನು ಕೈಬಿಟ್ಟಿದ್ದಾರೆ. ಮುಖ್ಯಮಂತ್ರಿ ವೀರಾವೇಶದ ಮಾತನಾಡಿ ತಮ್ಮ ಸರಕಾರ ಭಾಗಿಯಾಗಿಲ್ಲ ಎಂದಿದ್ದಾರೆ. ಹಾಗಿದ್ದರೆ ರಾಜೀನಾಮೆ ಕೊಟ್ಟದ್ದು ಯಾಕೆ? ಬುದ್ಧಿ ಇಲ್ಲದೇ ರಾಜೀನಾಮೆ ಕೊಟ್ಟರೇ ಎಂದು ಕೇಳಿದರು.
89 ಕೋಟಿ ಲೂಟಿ ಆಗಿದೆ ಎಂದು ನೀವೇ ಒಪ್ಪಿಕೊಂಡಿದ್ದೀರಿ. ಆತ್ಮಹತ್ಯೆಯ, ಲೂಟಿಯ ತನಿಖೆ ಮಾಡುವುದನ್ನು ಬಿಟ್ಟು ನಿಮ್ಮ ಸರಕಾರದಲ್ಲಿ ಹೀಗಾಗಿತ್ತು, ಹಾಗಾಗಿತ್ತು ಎಂದು ಹೇಳಿದ್ದು ಸರಿಯೇ? ಶೇ 40 ಸರಕಾರ ಎಂದು ನಮ್ಮ ವಿರುದ್ಧ ಪೋಸ್ಟರ್ ಅಂಟಿಸಿದ್ದೀರಲ್ಲವೇ? 14 ತಿಂಗಳಾದರೂ ಶೇ 40 ಸರಕಾರ ಎಂಬ ವಿಷಯದಲ್ಲಿ ಫಲಿತಾಂಶ ಬಂದಿದೆಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಏನೂ ಇಲ್ಲ; ಅದೆಲ್ಲ ಬೋಗಸ್ ಎಂದು ತಿಳಿಸಿದರು.
ದಲಿತನ ಸಾವಿಗೆ ನ್ಯಾಯ ಸಿಗಬೇಕು. ಲೂಟಿಯಾದ ಹಣ ವಾಪಸ್ ಅವರಿಗೆ ಸಿಗಬೇಕು. ಈ ಸರಕಾರದಲ್ಲಿ ಅಪರಾಧಿಗಳು ಯಾರಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ನಮ್ಮ ಬೇಡಿಕೆಗಳಿಗೆ ಎಳ್ಳು ನೀರು ಬಿಟ್ಟಂತೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ ಎಂದು ಆಕ್ಷೇಪಿಸಿದರು.
ಸದನ ಇವತ್ತು ನಡೆದಿದ್ದೇ ಸರಿ ಇಲ್ಲ. ಕರ್ನಾಟಕದ ಇತಿಹಾಸದಲ್ಲಿ ಈ ಥರ ಸದನ ನಡೆದುದು ಒಂದು ಕಪ್ಪು ಚುಕ್ಕಿ ಎಂದು ಟೀಕಿಸಿದರು. ಸದನ ನಡೆಸಲು ಸ್ಪೀಕರ್ ಅವರಿಗೆ ಆಗಲೇ ಇಲ್ಲ. ಸ್ಪೀಕರ್ ಅವರು ಸದನ ನಡೆಸುವಲ್ಲಿ ವಿಫಲವಾಗಿದ್ದಾರೆ. ಮೂಕಪ್ರೇಕ್ಷಕರಂತೆ ಅವರು ಕುಳಿತಿದ್ದರು. ಇಂಥ ಸ್ಪೀಕರ್ ಅವರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಾಗದು. ಅವಮಾನಕರ ರೀತಿಯಲ್ಲಿ ಸದನ ನಡೆಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸ್ಪೀಕರ್ ಅವರ ನಡೆ ಸದನಕ್ಕೆ ಗೌರವ ತರುವಂತೆ ಇರಲಿಲ್ಲ ಎಂದು ಅವರು ತಿಳಿಸಿದರು. ಈ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಕುರಿತು ಚರ್ಚೆ ಮಾಡಿ ನಿರ್ಧರಿಸಲಿದ್ದೇವೆ ಎಂದು ಅವರು ಹೇಳಿದರು.
ಸಿಎಂ ಸಿದ್ಧರಾಮಯ್ಯ ರಾಜೀನಾಮೆ ಕೊಡುವ ದಿನ ಹತ್ತಿರ ಬಂದಿದೆ: BJP ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
ರಾಜ್ಯದಲ್ಲಿ 6 ತಿಂಗಳಲ್ಲಿ 1,791 ಡ್ರಗ್ಸ್ ಪ್ರಕರಣಗಳು ದಾಖಲು : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ