ಗುಜರಾತ್ ನ ವಡೋದರದ ಆಸ್ಪತ್ರೆಯಲ್ಲಿ ಒಂದು ವರ್ಷದ ಬಾಲಕನ ಎದೆಯ ಎಕ್ಸ್-ರೇ ಈ ವಾರ ವೈದ್ಯರನ್ನು ದಿಗ್ಭ್ರಮೆಗೊಳಿಸಿದ್ದು, ಅನಿರೀಕ್ಷಿತ ಪತ್ತೆಯಾಗಿದೆ – ಶ್ವಾಸನಾಳದಲ್ಲಿ ಎಲ್ಇಡಿ ಬಲ್ಬ್ ಇರುವುದು ಬಹಿರಂಗವಾಗಿದೆ.
ಆನಂದ್ ಜಿಲ್ಲೆಯ ಮಲ್ಸರ್ ಗ್ರಾಮದ ಮಗುವಿನ ಪೋಷಕರು, ಕಳೆದ ಎರಡು ತಿಂಗಳಿಂದ ವಾಸಿಯಾಗದ ಶೀತ, ಕೆಮ್ಮು ಮತ್ತು ಜ್ವರದ ದೂರಿನ ಮೇರೆಗೆ ತಮ್ಮ ಒಂದು ವರ್ಷದ ಹಸುಳೆಯನ್ನು ಗುಜರಾತ್ ವೈದ್ಯಕೀಯ ಶಿಕ್ಷಣ ಸಂಶೋಧನಾ ಸಂಸ್ಥೆಯ (GMERS) ಗೋತ್ರಿ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ಕರೆತಂದಿದ್ದರು. ಈ ಹಿಂದೆ ಮಗುವಿಗೆ ನ್ಯುಮೋನಿಯಾ ಇದೆ ಎಂದು ಭಾವಿಸಿ ಅದಕ್ಕೆ ಚಿಕಿತ್ಸೆ ನೀಡಲಾಗಿತ್ತು.
ಅಚ್ಚರಿಯ ಸತ್ಯ ಬಯಲು:
ನಂತರ ಮಗುವನ್ನು ಇಎನ್‌ಟಿ (ENT) ವಿಭಾಗಕ್ಕೆ ಕಳುಹಿಸಲಾಯಿತು. ಅಲ್ಲಿ ಮಗುವಿನ ಎದೆಯ ಎಕ್ಸ್-ರೇ ತೆಗೆದಾಗ, ಬಲ ಬ್ರಾಂಕಸ್‌ನಲ್ಲಿ (ಶ್ವಾಸನಾಳದಿಂದ ಶ್ವಾಸಕೋಶಕ್ಕೆ ಗಾಳಿ ಒಯ್ಯುವ ದಾರಿ) ಯಾವುದೋ ವಸ್ತು ಸಿಲುಕಿರುವುದು ಕಂಡುಬಂದಿದೆ. ವೈದ್ಯರು ಹತ್ತಿರದಿಂದ ಪರೀಕ್ಷಿಸಿದಾಗ, ಸುಮಾರು 1 ಸೆಂಟಿಮೀಟರ್ ಅಗಲದ ಎಲ್‌ಇಡಿ ಬಲ್ಬ್ ಶ್ವಾಸನಾಳದೊಳಗೆ ಸಿಲುಕಿರುವುದು ಕಂಡುಬಂದು ಅವರು ದಿಗಿಲುಗೊಂಡರು. ಈ ಬಲ್ಬ್ ಮಗುವಿನ ಬಲ ಶ್ವಾಸಕೋಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿತ್ತು ಮತ್ತು ಶ್ವಾಸಕೋಶವು ಕಾರ್ಯನಿರ್ವಹಿಸದ ಸ್ಥಿತಿಗೆ (Verge of collapse) ತಲುಪಿತ್ತು.
ಯಶಸ್ವಿ ಶಸ್ತ್ರಚಿಕಿತ್ಸೆ:
ವೈದ್ಯರು ತಕ್ಷಣವೇ ‘ಬ್ರಾಂಕೋಸ್ಕೋಪಿ’ (Bronchoscopy) ವಿಧಾನದ ಮೂಲಕ ಆ ವಸ್ತುವನ್ನು ಹೊರತೆಗೆಯಲು ನಿರ್ಧರಿಸಿದರು. ಬ್ರಾಂಕೋಸ್ಕೋಪ್ ಎಂಬ ಉಪಕರಣವನ್ನು ಗಂಟಲಿನ ಮೂಲಕ ಶ್ವಾಸನಾಳಕ್ಕೆ ಇಳಿಸಿ, ಫೋರ್ಸ್ಪ್ಸ್ (Grasping forceps) ಬಳಸಿ ಆ ಎಲ್‌ಇಡಿ ಬಲ್ಬ್ ಅನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು.
ವೈದ್ಯರ ವಿವರಣೆ:
“ಮಗು ಕಳೆದ ಒಂದೂವರೆ ತಿಂಗಳಿಂದ ಸತತ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿತ್ತು. ಪೋಷಕರು ಹಲವು ಖಾಸಗಿ ಆಸ್ಪತ್ರೆಗಳಿಗೆ ತೋರಿಸಿದ್ದರು, ಅಲ್ಲಿ ನ್ಯುಮೋನಿಯಾ ಎಂದು ಚಿಕಿತ್ಸೆ ನೀಡಲಾಗಿತ್ತು. ಆದರೆ ಯಾವುದೇ ಸುಧಾರಣೆ ಕಂಡುಬರದಿದ್ದಾಗ ಫೆಬ್ರವರಿ 4 ರಂದು ನಮ್ಮ ಆಸ್ಪತ್ರೆಗೆ ಕರೆತಂದರು,” ಎಂದು ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ಹಿರೇನ್ ಸೋನಿ ತಿಳಿಸಿದ್ದಾರೆ.
ಫೆಬ್ರವರಿ 5 ರಂದು ಅರಿವಳಿಕೆ (General Anaesthesia) ನೀಡಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. “ವಸ್ತುವು ಒಂದು ತಿಂಗಳಿಗೂ ಹೆಚ್ಚು ಕಾಲ ಶರೀರದ ಒಳಗಿದ್ದಿದ್ದರಿಂದ, ಅದು ಅಂಗಾಂಶಗಳ ನಡುವೆ ಬಲವಾಗಿ ಸಿಲುಕಿಕೊಂಡಿತ್ತು. ಕೇವಲ ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಶ್ವಾಸನಾಳಕ್ಕೆ ಹಾನಿಯಾಗದಂತೆ ಆ ವಸ್ತುವನ್ನು ಹೊರತೆಗೆಯುವುದು ನಮಗೆ ದೊಡ್ಡ ಸವಾಲಾಗಿತ್ತು,” ಎಂದು ಡಾ. ಸೋನಿ ವಿವರಿಸಿದ್ದಾರೆ.
ಎಚ್ಚರಿಕೆ:
ಶಸ್ತ್ರಚಿಕಿತ್ಸೆಯ ನಂತರ ಮಗುವನ್ನು ಐಸಿಯುನಲ್ಲಿ ಇರಿಸಲಾಗಿದ್ದು, ಈಗ ಮಗು ಚೇತರಿಸಿಕೊಳ್ಳುತ್ತಿದೆ. ಸಣ್ಣ ಮಕ್ಕಳ ಮೇಲೆ ನಿಗಾ ಇಡದಿದ್ದಾಗ ಅವರು ಇಂತಹ ವಸ್ತುಗಳನ್ನು ನುಂಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭಗಳಲ್ಲಿ ವಿಳಂಬ ಮಾಡದೆ ತಕ್ಷಣವೇ ತಪಾಸಣೆ ನಡೆಸುವುದು ಜೀವ ಉಳಿಸಲು ಮುಖ್ಯ ಎಂದು ವೈದ್ಯರು ಪೋಷಕರಿಗೆ ಕಿವಿಮಾತು ಹೇಳಿದ್ದಾರೆ.








