ವಾಷಿಂಗ್ಟನ್/ದುಬೈ:ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಸ್ಫೋಟಕ ಹಂತ ತಲುಪಿರುವ ಬೆನ್ನಲ್ಲೇ, ಅಮೆರಿಕವು ತನ್ನ ಮಿಲಿಟರಿ ಶಕ್ತಿಯನ್ನು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಬಲಪಡಿಸಿದೆ. ವರದಿಗಳ ಪ್ರಕಾರ, ಅಮೆರಿಕದ ಪ್ರಬಲ ಯುದ್ಧನೌಕೆಗಳಲ್ಲಿ ಒಂದಾದ ‘ಯುಎಸ್ಎಸ್ ಬಾಕ್ಸರ್’ (USS Boxer) ಸೇರಿದಂತೆ ಒಟ್ಟು ಮೂರು ನೌಕಾಪಡೆ ಹಡಗುಗಳು ಈಗ ಇರಾನ್ ಯುದ್ಧ ವಲಯದತ್ತ ಮುನ್ನುಗ್ಗುತ್ತಿವೆ.
ಯುಎಸ್ಎಸ್ ಬಾಕ್ಸರ್ ನೌಕೆಯೊಂದಿಗೆ ಸುಮಾರು 2,500ಕ್ಕೂ ಹೆಚ್ಚು ನುರಿತ ಮರೀನ್ ಸೈನಿಕರನ್ನು ಈ ಪ್ರದೇಶಕ್ಕೆ ಕಳುಹಿಸಲಾಗಿದೆ. ಯಾವುದೇ ಕ್ಷಣದಲ್ಲಿ ಎದುರಾಗಬಹುದಾದ ತುರ್ತು ಪರಿಸ್ಥಿತಿಯನ್ನು ಎದುರಿಸಲು ಈ ಪಡೆ ಸನ್ನದ್ಧವಾಗಿದೆ.ಕೇವಲ ಬಾಕ್ಸರ್ ಮಾತ್ರವಲ್ಲದೆ, ಅದರೊಂದಿಗೆ ಇತರ ಎರಡು ಪ್ರಮುಖ ಯುದ್ಧನೌಕೆಗಳು ಇರಾನ್ ತೀರದ ಸಮೀಪವಿರುವ ಆಯಕಟ್ಟಿನ ಜಾಗಗಳಲ್ಲಿ ಮೊಕ್ಕಾಂ ಹೂಡಲಿವೆ.
ಇರಾನ್ ಇತ್ತೀಚೆಗೆ ನೀಡಿದ ಸರಣಿ ಬೆದರಿಕೆಗಳು ಮತ್ತು ಇಸ್ರೇಲ್ ಮೇಲಿನ ದಾಳಿಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ತನ್ನ ಮಿತ್ರ ರಾಷ್ಟ್ರಗಳ ರಕ್ಷಣೆಗಾಗಿ ಅಮೆರಿಕ ಈ ಕ್ರಮ ಕೈಗೊಂಡಿದೆ. ಈ ಯುದ್ಧನೌಕೆಗಳು ಅತ್ಯಾಧುನಿಕ ಫೈಟರ್ ಜೆಟ್ಗಳು ಮತ್ತು ಹೆಲಿಕಾಪ್ಟರ್ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಸಮುದ್ರ ಮಾರ್ಗದ ಮೂಲಕ ಇರಾನ್ ಮೇಲೆ ನಿಗಾ ಇಡಲಿವೆ.








