ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದ ವೇಳೆ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವ ಸಲುವಾಗಿ ಪ್ರಾಯೋಗಿಕವಾಗಿ ಇಕೊಫಿಕ್ಸ್ ಮಿಶ್ರಣ ಬಕಳೆ ಮಾಡಲಾಗಿದೆ ಎಂದು ಬಿಬಿಎಂಪಿಯ ಪ್ರಧಾನ ಅಭಿಯಂತರರಾದ ಡಾ. ಬಿ.ಎಸ್ ಪ್ರಹ್ಲಾದ್ ರವರು ತಿಳಿಸಿದರು.
ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳ ಸಮಸ್ಯೆಯಿಂದಾಗಿ ಸಂಚಾರ ದಟ್ಟಣೆಯನ್ನು ಉಂಟುಮಾಡುವುದರ ಜೊತೆಗೆ ರಸ್ತೆ ಅಪಘಾತಗಳಿಗೆ ಕೂಡಾ ಕಾರಣವಾಗುತ್ತದೆ. ಈ ಸವಾಲನ್ನು ಎದುರಿಸಲು ಭಾರತದ ಪ್ರಮುಖ ರಸ್ತೆ ಸಂಶೋಧನಾ ಸಂಸ್ಥೆ ಸಿ.ಎಸ್.ಆರ್.ಐ – ಸಿ.ಆರ್.ಆರ್.ಐ, ರಮುಕ ಗ್ಲೋಬಲ್ ಸರ್ವೀಸ್ ಹಾಗೂ ಪಾಲಿಕೆಯ ಸಹಯೋಗದೊಂದಿಗೆ ಇಂದು ಬೆಂಗಳೂರಿನ ಅಂಜನಿ ದೇವಸ್ಥಾನದ ಬಳಿಯ ಅವೆನ್ಯೂ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಮೂಲಕ ಸ್ಟೀಲ್ ಸ್ಲ್ಯಾಗ್ ಆಧಾರಿತ ಇಕೊಫಿಕ್ಸ್ ತಂತ್ರಜ್ಞಾನದ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಭಾರತದ ಪ್ರಮುಖ ರಸ್ತೆ ಸಂಶೋಧನಾ ಸಂಸ್ಥೆ CSIR – ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್(CRRI) ಪಾಲಿಕೆ ಸಹಯೋಗದೊಂದಿಗೆ ಬೆಂಗಳೂರು ನಗರದ ರಸ್ತೆಯ ಗುಂಡಿಗಳನ್ನು ಸರಿಪಡಿಸಲು ಕೈಜೋಡಿಸಿದೆ. ನಗರದ ರಸ್ತೆಗಳು ಮಳೆಗಾಲದಲ್ಲಿ ಹಾಟ್ ಮಿಕ್ಸ್ ಪ್ಲಾಂಟ್ ಕಾರ್ಯನಿರ್ವಹಿಸಲು ಸಾಧ್ಯವಾಗದ ಸಂದರ್ಭದಲ್ಲಿ, ಪರಿಸರ ಸ್ನೇಹಿ ರೀತಿಯಲ್ಲಿ ಬಾಳಿಕೆ ಬರುವ ರಸ್ತೆ ದುರಸ್ತಿ ಮಾಡಲು ಇಕೊಫಿಕ್ಸ್ ತಂತ್ರಜ್ಞಾನವು ನಗರದ ರಸ್ತೆಗಳಿಗೆ ವರದಾನವಾಗಲಿದೆ ಎಂದು ಹೇಳಿದರು.
ಇಕೊಫಿಕ್ಸ್ ತಯಾರಿ ಹೇಗೆ:
ಇಕೊಫಿಕ್ಸ್ ಅನ್ನು ಉಕ್ಕಿನ ಕೈಗಾರಿಕೆಗಳ ಕೈಗಾರಿಕಾ ತ್ಯಾಜ್ಯವನ್ನು ಅಂದರೆ ಕಬ್ಬಿಣ ಮತ್ತು ಉಕ್ಕಿನ ಸ್ಲ್ಯಾಗ್ ಬಳಸಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಯಾವುದೇ ನಿರ್ಜಲೀಕರಣದ ಅಗತ್ಯವಿಲ್ಲದೇ ನೀರು ತುಂಬಿದ ಗುಂಡಿಯನ್ನು ಸರಿಪಡಿಸಬಹುದಾಗಿದೆ.
ಟ್ಯಾಕ್ ಕೋಟ್ ಮಾಡುವ ಅಗತ್ಯವಿಲ್ಲ:
ರಸ್ತೆ ಗುಂಡಿಗಳನ್ನು ಮುಚ್ಚಬೇಕಾದರೆ ಗುಂಡಿಗಳನ್ನು ನೀರು ತೆರವು ಮಾಡುವ ಹಾಗು ಸ್ವಚ್ಛ ಮಾಡುವ ಮತ್ತು ಟ್ಯಾಕ್ ಕೋಟ್ ಅನ್ನು ಅನ್ವಯಿಸುವ ಅಗತ್ಯವಿರುತ್ತದೆ. ಆದರೆ ಇಕೋಫಿಕ್ಸ್ ಮಿಶ್ರಣಕ್ಕೆ ಯಾವುದೇ ಟ್ಯಾಕ್ ಕೋಟ್ ಅಗತ್ಯವಿಲ್ಲದೇ ನೀರು ತುಂಬಿದ ಸ್ಥಿತಿಯಲ್ಲಿಯೂ ಗುಂಡಿ ದುರಸ್ತಿಪಡಿಸಬಹುದಾಗಿದೆ. ದುರಸ್ತಿಯಾದ ಕೂಡಾ ರಸ್ತೆ ಸಂಚಾರಕ್ಕೆ ಅವಕಾಶ ನೀಡಬಹುದಾಗಿದೆ. ಸಂಸ್ಕರಿತ ಕಬ್ಬಿಣ ಮತ್ತು ಉಕ್ಕಿನ ಸ್ಲ್ಯಾಗ್ ಮತ್ತು ವಿಶೇಷವಾಗಿ ಕಸ್ಟಮೈಸ್ ಮಾಡಿದ ಬೈಂಡರ್ ಅನ್ನು ಬಳಸಿಕೊಂಡು ಇಕೋಫಿಕ್ಸ್ ಮಿಶ್ರಣವನ್ನು ತಯಾರಿಸಲಾಗಿರುವುದರಿಂದ ಬಾಳಿಕೆ ಮತ್ತು ದೀರ್ಘಾಯುಷ್ಯದ ವಿಷಯದಲ್ಲಿ ದುರಸ್ತಿ ಮಾಡಿದ ಮೇಲ್ಮೈ ಸಾಮಾನ್ಯ ರಸ್ತೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಬೇರೆ ರಾಜ್ಯಗಳಲ್ಲೂ ಇದರ ಬಳಕೆ:
ಇಕೋಫಿಕ್ಸ್ ಮಿಶ್ರಣದ ತಂತ್ರಜ್ಞಾನವು ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಗಳಲ್ಲಿಯೂ ಜಾರಿಗೊಳಿಸಲಾಗಿದ್ದು, ಬಾಳಿಕೆ ಮತ್ತು ಕಾರ್ಯಕ್ಷಮತೆಯ ವಿಷಯದಲ್ಲಿ ಈಗಾಗಲೇ ಉತ್ತಮವಾಗಿ ಪರೀಕ್ಷಿಸಲ್ಪಟ್ಟಿದೆ.
ಈ ವೇಳೆ ಸಿಎಸ್‌ಐಆರ್ ನ ಪ್ರಧಾನ ವಿಜ್ಞಾನಿ ಸತೀಶ್ ಪಾಂಡೆ, ಟಿಇಸಿ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಆರೀಫ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.