ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮುಂದುವರಿದಿರುವ ಬೆನ್ನಲ್ಲೇ, ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಘರ್ಷ ಹೊಸ ತಿರುವು ಪಡೆದುಕೊಂಡಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಉಭಯ ದೇಶಗಳ ನಡುವೆ ಗುಪ್ತವಾಗಿ ಶಾಂತಿ ಮಾತುಕತೆ ನಡೆಯುತ್ತಿದೆ ಎಂಬ ವರದಿಗಳನ್ನು ಅಮೆರಿಕದ ಶ್ವೇತಭವನವು ಅಧಿಕೃತವಾಗಿ ನಿರಾಕರಿಸಿದೆ.
ಕಳೆದ ಕೆಲವು ದಿನಗಳಿಂದ ಇರಾನ್ ಪ್ರತಿನಿಧಿಗಳು ಮತ್ತು ಅಮೆರಿಕದ ನಿಯೋಗವು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ರಹಸ್ಯ ಸಭೆ ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈ ಕುರಿತು ಪ್ರತಿಕ್ರಿಯಿಸಿರುವ ಶ್ವೇತಭವನ, “ಇಸ್ಲಾಮಾಬಾದ್‌ನಲ್ಲಿ ಯಾವುದೇ ಅಧಿಕೃತ ಶಾಂತಿ ಮಾತುಕತೆ ನಡೆಯುತ್ತಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಕೇವಲ ಊಹಾಪೋಹಗಳಾಗಿವೆ” ಎಂದು ಸ್ಪಷ್ಟಪಡಿಸಿದೆ.
ಪ್ರಸ್ತುತ ಯಾವುದೇ ಸಂಧಾನ ಪ್ರಕ್ರಿಯೆಗಳು ಅಂತಿಮ ಹಂತ ತಲುಪಿಲ್ಲ ಮತ್ತು ಇರಾನ್‌ನ ಮೊಂಡುತನವೇ ಇದಕ್ಕೆ ಕಾರಣ ಎಂದು ಅಮೆರಿಕ ಆರೋಪಿಸಿದೆ.








