ಇಸ್ಲಾಮಾಬಾದ್:ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ 15 ದಿನಗಳ ತಾತ್ಕಾಲಿಕ ಕದನ ವಿರಾಮವು ಎರಡನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಈ ನಡುವೆಯೇ ಇರಾನ್ ಅತ್ಯಂತ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ತನ್ನ ಪರಮಾಣು ಇಂಧನ ಪುಷ್ಟೀಕರಣ (Nuclear Enrichment) ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ನಾಳೆಯಿಂದ ಪಾಕಿಸ್ತಾನದಲ್ಲಿ ನಡೆಯಲಿರುವ ಶಾಂತಿ ಮಾತುಕತೆಯ ಮೇಲೆ ಕರಿನೆರಳು ಚಾಚುವ ಸಾಧ್ಯತೆಯಿದೆ.
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘೆರ್ ಕ್ವಾಲಿಬಾಫ್ ಮಾತನಾಡಿ, “ನಮ್ಮ ಪರಮಾಣು ಹಕ್ಕುಗಳ ಮೇಲೆ ಯಾವುದೇ ರಾಜಿ ಇಲ್ಲ. ಇಂಧನ ಪುಷ್ಟೀಕರಣವು ಮೊದಲಿನಂತೆಯೇ ಮುಂದುವರಿಯಲಿದೆ” ಎಂದು ಘೋಷಿಸಿದ್ದಾರೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಇರಾನ್ ತನ್ನ ಪರಮಾಣು ಚಟುವಟಿಕೆ ನಿಲ್ಲಿಸಲಿದೆ” ಎಂಬ ಹೇಳಿಕೆಗೆ ವ್ಯತಿರಿಕ್ತವಾಗಿದೆ.
ಇರಾನ್‌ನ ಉನ್ನತ ಮಟ್ಟದ ನಿಯೋಗವು ಇಂದು ರಾತ್ರಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ತಲುಪಲಿದೆ. ಈ ನಿಯೋಗದ ನೇತೃತ್ವವನ್ನು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘೆರ್ ಕ್ವಾಲಿಬಾಫ್ ವಹಿಸಲಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಸ್ಟೀವ್ ವಿಟ್ಕಾಫ್ ಮತ್ತು ಟ್ರಂಪ್ ಅಳಿಯ ಜ್ಯಾರೆಡ್ ಕುಶ್ನರ್ ಅವರನ್ನೊಳಗೊಂಡ ಪ್ರಭಾವಿ ತಂಡವು ಇಸ್ಲಾಮಾಬಾದ್‌ಗೆ ಆಗಮಿಸಲಿದೆ.








