ಲಖನೌ: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಭೀಕರ ಘಟನೆಯೊಂದು ನಡೆದಿದೆ. ಸಣ್ಣ ಜಗಳದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಐಸ್‌ಕ್ರೀಮ್ ವ್ಯಾಪಾರಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಲ್ಲದೆ, ಆತನ ಕತ್ತರಿಸಿದ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಮನೆಗೆ ನಡೆದು ಬಂದಿದ್ದಾನೆ. ಅಷ್ಟಕ್ಕೇ ನಿಲ್ಲದ ಈ ನರಹಂತಕ, ಮನೆಯಲ್ಲಿ ರಕ್ತಸಿಕ್ತ ತಲೆಯನ್ನು ಪಕ್ಕದಲ್ಲಿಟ್ಟುಕೊಂಡು ಅಡುಗೆ ಮಾಡಿ ಊಟ ಸಿದ್ಧಪಡಿಸಿರುವ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಆರೋಪಿ ಮತ್ತು ಐಸ್‌ಕ್ರೀಮ್ ವ್ಯಾಪಾರಿಯ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಈ ಸಿಟ್ಟಿನಲ್ಲಿ ಆರೋಪಿ ಹರಿತವಾದ ಆಯುಧದಿಂದ ವ್ಯಾಪಾರಿಯ ತಲೆಯನ್ನು ದೇಹದಿಂದ ಬೇರ್ಪಡಿಸಿದ್ದಾನೆ. ರಕ್ತಸಿಕ್ತ ತಲೆಯನ್ನು ಹಿಡಿದು ಆರೋಪಿ ರಸ್ತೆಯಲ್ಲಿ ನಡೆದು ಬರುತ್ತಿದ್ದನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಆರೋಪಿಯ ಮನೆಗೆ ನುಗ್ಗಿದಾಗ ಅಲ್ಲಿನ ದೃಶ್ಯ ಕಂಡು ಹೌಹಾರಿದ್ದಾರೆ. ಕತ್ತರಿಸಿದ ತಲೆಯನ್ನು ಮನೆಯ ಒಂದು ಮೂಲೆಯಲ್ಲಿ ಇರಿಸಿದ್ದ ಆರೋಪಿ, ಏನೂ ತಿಳಿಯದವನಂತೆ ಅಡುಗೆ ಮಾಡುತ್ತಿದ್ದ ಎನ್ನಲಾಗಿದೆ.
ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿದ್ದು, ಹತ್ಯೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಮಾನಸಿಕ ಅಸ್ವಸ್ಥನೇ ಅಥವಾ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.








