ಲಖನೌ: ಗ್ರಾಹಕರ ಆರೋಗ್ಯ ಮತ್ತು ಆಹಾರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ಸರ್ಕಾರವು ಮೊಟ್ಟೆ ಮಾರಾಟಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸಿದೆ. ಬರುವ ಏಪ್ರಿಲ್ 1 ರಿಂದ ರಾಜ್ಯದಲ್ಲಿ ಮಾರಾಟವಾಗುವ ಪ್ರತಿಯೊಂದು ಮೊಟ್ಟೆಯ ಮೇಲೆ ಅದು ‘ಹುಟ್ಟಿದ ದಿನಾಂಕ’ (Date of Laying) ಮತ್ತು ‘ಬಳಕೆಯ ಅಂತಿಮ ದಿನಾಂಕ’ವನ್ನು (Expiry Date) ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಸರ್ಕಾರದ ಆದೇಶದ ಮುಖ್ಯಾಂಶಗಳು:
ಕಡ್ಡಾಯ ಮುದ್ರೆ: ಮೊಟ್ಟೆ ಉತ್ಪಾದಕರು ಮತ್ತು ವ್ಯಾಪಾರಿಗಳು ಪ್ರತಿಯೊಂದು ಮೊಟ್ಟೆಯ ಮೇಲೆ ಈ ವಿವರಗಳನ್ನು ಸ್ಟ್ಯಾಂಪ್ ಮಾಡಬೇಕು. ದಿನಾಂಕವಿಲ್ಲದ ಮೊಟ್ಟೆಗಳು ಮಾರುಕಟ್ಟೆಯಲ್ಲಿ ಕಂಡುಬಂದಲ್ಲಿ ಅವುಗಳನ್ನು ನಾಶಪಡಿಸಲಾಗುತ್ತದೆ ಅಥವಾ ‘ಮಾನವ ಬಳಕೆಗೆ ಯೋಗ್ಯವಲ್ಲ’ ಎಂದು ಹಣೆಪಟ್ಟಿ ಹಚ್ಚಲಾಗುತ್ತದೆ.
ಆರೋಗ್ಯದ ದೃಷ್ಟಿ: ಸಾಮಾನ್ಯವಾಗಿ ಮೊಟ್ಟೆಗಳು ಸುಮಾರು 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿದ್ದರೆ ಕೇವಲ 2 ವಾರ (14 ದಿನ) ಮಾತ್ರ ಬಳಕೆಗೆ ಯೋಗ್ಯವಾಗಿರುತ್ತವೆ. ಶೈತ್ಯೀಕರಣದಲ್ಲಿ (2 ರಿಂದ 8 ಡಿಗ್ರಿ ಸೆಲ್ಸಿಯಸ್) ಇಟ್ಟರೆ 5 ವಾರಗಳವರೆಗೆ ಬಳಸಬಹುದು. ಹಳೆಯ ಮೊಟ್ಟೆಗಳ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ವೆಚ್ಚದಾಯಕವಲ್ಲ: ಮೊಟ್ಟೆಯ ಮೇಲೆ ದಿನಾಂಕ ಮುದ್ರಿಸಲು ಕೇವಲ 3 ರಿಂದ 4 ಪೈಸೆ ಮಾತ್ರ ಖರ್ಚಾಗುವುದರಿಂದ, ಮೊಟ್ಟೆಯ ಬೆಲೆಯಲ್ಲಿ ಯಾವುದೇ ಏರಿಕೆಯಾಗುವುದಿಲ್ಲ ಎಂದು ಪಶುಸಂಗೋಪನಾ ಇಲಾಖೆ ಸ್ಪಷ್ಟಪಡಿಸಿದೆ.
ಕಟ್ಟುನಿಟ್ಟಿನ ತಪಾಸಣೆ: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FSDA) ಇಲಾಖೆಯು ರಾಜ್ಯದಾದ್ಯಂತ ಫಾರ್ಮ್‌ಗಳು ಮತ್ತು ಮಾರುಕಟ್ಟೆಗಳಲ್ಲಿ ನಿರಂತರ ತಪಾಸಣೆ ನಡೆಸಲಿದೆ. ಇತರ ರಾಜ್ಯಗಳಿಂದ ಬರುವ ಮೊಟ್ಟೆಗಳಿಗೂ ಈ ನಿಯಮ ಅನ್ವಯವಾಗಲಿದೆ.








