ಮೈಸೂರು: ಕೇಂದ್ರ ಬಜೆಟ್ ಬಗ್ಗೆ ಟೀಕೆ ಸರಿಯಲ್ಲ. ವಿಶಾಲ ತಳಹದಿಯ, ದೂರದೃಷ್ಟಿಯ ಬಜೆಟ್ ಇದಾಗಿದೆ. ಬಡವರು, ಮಹಿಳೆಯರು, ರೈತರು ಹಾಗೂ ಯುವ ಜನರ ಶ್ರೇಯೋಭಿವೃದ್ಧಿಗೆ ಅತಿ ಹೆಚ್ಚು ಒತ್ತು ನೀಡಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ದೇಶದ ಸರ್ವರ ವಿಕಾಸ ಆಗುತ್ತಿದೆ. ಎಲ್ಲರಿಗೂ ಕೇಂದ್ರ ಸರ್ಕಾರದ ಯೋಜನೆಗಳು ಮುಟ್ಟುತ್ತಿವೆ ಎಂದು ಅವರು ಹೇಳಿದರು.
ಮೈಸೂರಿನಲ್ಲಿ ಸೋಮವಾರ ಕೇಂದ್ರ ಬಜೆಟ್ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದ ಅವರು; ಮಧ್ಯಮ ವರ್ಗಕ್ಕೆ ತೆರಿಗೆಯ ಹೊರೆ ಇಳಿಸಲಾಗಿದೆ. ರೈತರ ಆರ್ಥಿಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಅನೇಕ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆ. ಯಾವ ಕಾರ್ಯಕ್ರಮವೂ ಘೋಷಣೆಯಾಗಿ ಉಳಿಯುವುದಿಲ್ಲ, ಎಲ್ಲವೂ ಜಾರಿಗೆ ಬರುತ್ತವೆ ಎಂದು ಕೇಂದ್ರ ಸಚಿವರು ಹೇಳಿದರು.
ರೈತರು, ಮಹಿಳೆಯರು, ಯುವಕರು, ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡುವುದೇ ಈ ಬಜೆಟ್ ಆಶಯವಾಗಿದೆ. ಈ ಬಾರಿ ₹50 ಲಕ್ಷ ಕೋಟಿ ಆಯವ್ಯಯ ಮಂಡನೆ ಮಾಡಲಾಗಿದೆ. ₹11.20 ಲಕ್ಷ ಕೋಟಿ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಮಾಡುವ ಘೋಷಣೆ ಮಾಡಲಾಗಿದೆ. ಕೃಷಿ ವಲಯಕ್ಕೆ ₹1.72 ಲಕ್ಷ ಅನುದಾನ ಕೊಡಲಾಗಿದೆ. ಪ್ರಧಾನಮಂತ್ರಿ ಧನಧಾನ್ಯ ಯೋಜನೆಗೆ ಹಿಂದುಳಿದ ನೂರು ಜಿಲ್ಕೆಗಳ ಆಯ್ಕೆ ಮಾಡಿಕೊಳ್ಳಲಾಗಿದೆ. ಮೀನುಗಾರಿಕೆ, ಹೈನುಗಾರಿಕೆ, ಚರ್ಮೋದ್ಯಮಕ್ಕೆ ಒತ್ತು ನೀಡಲಾಗಿದೆ. ಚರ್ಮೋದ್ಯಮದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಗತ್ತಿನ ಎಲ್ಲಾ ಪ್ರಮುಖ ಆರ್ಥಿಕತೆಗಳಲ್ಲಿಯೇ ಭಾರತದ ಆರ್ಥಿಕತೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ ಅವರ ಸರ್ಕಾರದ ಅಭಿವೃದ್ಧಿ ಟ್ರ್ಯಾಕ್ ರೆಕಾರ್ಡ್ ಮತ್ತು ರಚನಾತ್ಮಕ ಸುಧಾರಣೆಗಳು ಗಮನಾರ್ಹವಾಗಿ ಅಂತಾರಾಷ್ಟ್ರೀಯ ಗಮನ ಸೆಳೆದಿವೆ. ಮೋದಿ ಅವರ ಸರ್ಕಾರದ ಮೊದಲ 2 ಅವಧಿಯಲ್ಲಿನ ಪರಿವರ್ತನಾಶೀಲ ಕಾರ್ಯಕ್ರಮಗಳು ಅತ್ಯುತ್ತಮ. ಈ ಸರ್ಕಾರವು ದೃಢಸಂಕಲ್ಪದೊಂದಿಗೆ ಜನರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಬಡವರು, ಯುವಕರು, ರೈತರು ಮತ್ತು ಮಹಿಳೆಯರು ಬಜೆಟ್ ನ ಕೇಂದ್ರ ಬಿಂದುವಾಗಿದ್ದಾರೆ. ಇವರೆಲ್ಲರ ಶ್ರೇಯೋಭಿವೃದ್ಧಿಗೆ ಒತ್ತು ಕೊಡಲಾಗಿದೆ. ದುಡಿಯುವ ಜನರು, ಅದರಲ್ಲಿಯೂ ಮಧ್ಯಮ ವರ್ಗದ ಜನರಿಗೆ ಬಜೆಟ್ ಸ್ಪಂದಿಸಿದೆ. ₹12 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿದೆ. 2047ನೇ ವರ್ಷಕ್ಕೆ ವಿಕಸಿತ ಭಾರತ, ಅಂದರೆ ಅಭಿವೃದ್ಧಿ ಹೊಂದಿದ ಭಾರತ ಕನಸು ನಮಸು ಮಾಡಬೇಕು ಎನ್ನುವುದು ನಮ್ಮ ಪ್ರಧಾನಿಗಳ ಬಹುದೊಡ್ಡ ಗುರಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.
ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ರಾಷ್ಟ್ರ ನಿರ್ಮಾಣದಲ್ಲಿ ಮಧ್ಯಮ ವರ್ಗದ ಮಹೋನ್ನತ ಶಕ್ತಿ ಮತ್ತು ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟಿದೆ. ಈ ಕಾರಣಕ್ಕೆ ಅವರ ತೆರಿಗೆ ಹೊರೆಯನ್ನು ಕಡಿಮೆ ಮಾಡಿದೆ. 2014ರ ನಂತರ, ‘ತೆರಿಗೆ ರಹಿತ’ (Nil Tax) ಸ್ಲ್ಯಾಬ್ ಅನ್ನು ₹2.5 ಲಕ್ಷಕ್ಕೆ ಏರಿಸಲಾಯಿತು. ಅದನ್ನು 2019 ರಲ್ಲಿ ₹5 ಲಕ್ಷಕ್ಕೆ ಮತ್ತು 2023ರಲ್ಲಿ ₹7 ಲಕ್ಷಕ್ಕೆ ಹೆಚ್ಚಿಸಲಾಯಿತು. ಈ ಬಜೆಟ್‌ನಲ್ಲಿ ಸರ್ಕಾರವು ಹೊಸ ಆಡಳಿತದ ಅಡಿಯಲ್ಲಿ 12 ಲಕ್ಷ ಆದಾಯದವರೆಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ. ಸಂಬಳ ಪಡೆಯುವ ವರ್ಗಕ್ಕೆ, 12.75 ಲಕ್ಷ ವಾರ್ಷಿಕ ಆದಾಯದವರೆಗೆ ಯಾವುದೇ ಆದಾಯ ತೆರಿಗೆ ಅನ್ವಯಿಸುವುದಿಲ್ಲ. ವೇತನ ವರ್ಗಕ್ಕೆ ಮೋದಿ ಸರ್ಕಾರ ನೀಡಿರುವ ಬಹುದೊಡ್ಡ ಕೊಡುಗೆ ಇದಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಕೇಂದ್ರ ಸರ್ಕಾರವು ‘ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯನ್ನು ಕೈಗೊಳ್ಳುತ್ತದೆ. ಈ ಯೋಜನೆಯು ಕಡಿಮೆ ಉತ್ಪಾದಕತೆ, ಮಧ್ಯಮ ಪ್ರಮಾಣದ ಬೆಳೆ ಮತ್ತು ಸರಾಸರಿಗಿಂತ ಕಡಿಮೆ ಸಾಲ ಸೌಲಭ್ಯ ದೊರೆತಿರುವ ದೇಶದ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ. 1.7 ಕೋಟಿ ರೈತರಿಗೆ ನೆರವಾಗಲಿದೆ. ಬೇಳೆಕಾಲುಗಳಲ್ಲಿ ಸ್ವಾವಲಂಬನೆ ಸಾಧಿಸಲು ಬಜೆಟ್ ಗಮನ ಕೊಟ್ಟಿದೆ. ತೊಗರಿ, ಉದ್ದಿನ ಬೇಳೆ ಮತ್ತು ಮಸೂರ್ (ಕೆಂಪು ತೊಗರಿ ಬೇಕೆ) ಮೇಲೆ ವಿಶೇಷ ಗಮನಹರಿಸುವುದರೊಂದಿಗೆ ಸರ್ಕಾರವು ಈಗ 6 ವರ್ಷಗಳ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದೆ ಎಂದು ಕೇಂದ್ರ ಸಚಿವರು ಮಾಹಿತಿ ಹಂಚಿಕೊಂಡರು.
ಬೆಳೆಗಳ ಉತ್ಪಾದಕತೆಯನ್ನು ಸುಧಾರಿಸುವುದು, ದೇಶೀಯ ಬೇಳೆಕಾಳುಗಳ ಉತ್ಪಾದನೆ, ರೈತರಿಗೆ ಲಾಭದಾಯಕ ಬೆಲೆಗಳನ್ನು ಖಾತರಿಪಡಿಸುವುದು ಮತ್ತು ಆಯಾ ಪ್ರದೇಶಗಳ ಹವಾಮಾನಕ್ಕೆ ಪೂರಕವಾದ ಬೀಜಗಳ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದ ಅವರು; ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು (ಕೆಸಿಸಿ) 7.7 ಕೋಟಿ ರೈತರು, ಮೀನುಗಾರರು ಮತ್ತು ಹೈನುಗಾರರಿಗೆ ಅಲ್ಪಾವಧಿ ಸಾಲವನ್ನು ಒದಗಿಸುತ್ತವೆ. ಬದಲಾವಣೆ ಮಾಡಲಾದ ಬಡ್ಡಿ ಯೋಜನೆಯಡಿಯಲ್ಲಿ ಸಾಲಕ್ಕಾಗಿ ಈ ಸಾಲದ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ ಎಂದು ವಿವರಣೆ ನೀಡಿದರು.q
ರಾಜ್ಯಗಳ ಸಹಭಾಗಿತ್ವದಲ್ಲಿ ಸಮಗ್ರ ಬಹು-ವಲಯಗಳ ಗ್ರಾಮೀಣ ಸಮೃದ್ಧಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಇದು ಕೌಶಲ್ಯ, ಹೂಡಿಕೆ, ತಂತ್ರಜ್ಞಾನ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಮೂಲಕ ಕೃಷಿಯಲ್ಲಿನ ಉದ್ಯೋಗ ಸಮಸ್ಯೆಯನ್ನು ಪರಿಹರಿಸುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು ಹಾಗೂ ವಲಸೆಯನ್ನು ತಡೆಯುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಗಿಗ್ ಕಾರ್ಮಿಕರಿಗೆ ಗುರುತಿನ ಚೀಟಿಗಳು ಮತ್ತು ಪೋರ್ಟಲ್‌ನಲ್ಲಿ ಅವರ ನೋಂದಣಿಗಾಗಿ ಸರ್ಕಾರವು ವ್ಯವಸ್ಥೆ ಮಾಡುತ್ತದೆ. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಗಿಗ್ ಕಾರ್ಮಿಕರಿಗೆ ಆರೋಗ್ಯ ಸೇವೆ ಒದಗಿಸಲಾಗುವುದು. ಸುಮಾರು 1 ಕೋಟಿ ಗಿಗ್ ಗಿಗ್ ಕಾರ್ಮಿಕರಿಗೆ ಸಹಾಯವಾಗುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.
ಮೈಸೂರು ಕೊಡಗು ಕ್ಷೇತ್ರದ ಲೋಕಸಭೆ ಸದಸ್ಯರಾದ ಯದುವೀರ ಚಾಮರಾಜ ಒಡೆಯರ್, ಮಾಜಿ ಸಚಿವರಾದ ಸಾ.ರಾ. ಮಹೇಶ್, ಸಿ.ಎಸ್. ಪುಟ್ಟರಾಜು, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಮಾಜಿ ಶಾಸಕ ಅಶ್ವಿನ್ ಕುಮಾರ್, ಮಾಜಿ ಮೇಯರ್ ರವಿ ಕುಮಾರ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಮಹೇಶ್ ಸೇರಿದಂತೆ ಅನೇಕ ಗಣ್ಯರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸಿಎಂ ಅನುಕೂಲಕ್ಕೆ ತಕ್ಕಂತೆ ಲೋಕಾಯುಕ್ತ ವರದಿ: ಹೆಚ್.ಡಿ. ಕುಮಾರಸ್ವಾಮಿ ಟೀಕೆ