ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇಬ್ಬರು ದಲಿತ ಸಮುದಾಯದ ಸಚಿವರನ್ನು ಸಂಪುಟದಿಂದ ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದು, ಇದೀಗ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ಗುರಿಯಾಗಿಸಿ ಸಚಿವ ಸ್ಥಾನದಿಂದ ಪದಚ್ಯುತಗೊಳಿಸಲು ಭಾರಿ ಹುನ್ನಾರ ನಡೆಸಿದ್ದಾರೆ ಎಂದು ಅತಿ ಹಿಂದುಳಿದ ಸಣ್ಣ ಜಾತಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹನುಮೇಶ್ ಗುಂಡೂರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷುಲ್ಲಕ ಕಾರಣದಿಂದ ಕೆ.ಎನ್. ರಾಜಣ್ಣ ಹಾಗೂ ಭ್ರಷ್ಟಚಾರ ಆರೋಪ ಹೊರಿಸಿ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಗೊಳಿಸಲಾಯಿತು. ಸಿದ್ದರಾಮಯ್ಯ ಸರ್ಕಾರದಲ್ಲಿ ಏಳು ಮಂದಿ ದಲಿತ ಸಚಿವರಿದ್ದರು. ಇದೀಗ ಸಂಖ್ಯಾಬಲ ಐದಕ್ಕೆ ಕುಸಿದಿದೆ. ಈ ಸರ್ಕಾರದಲ್ಲಿ ದಲಿತರನ್ನೇ ಗುರಿ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಇಂತಹ ಷಡ್ಯಂತ್ರಗಳಿಗೆ ಅವಕಾಶ ನೀಡುವುದಿಲ್ಲ, ಹಾಗೇನಾದರೂ ಆದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ನಡೆಯುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಬಲ ಖಾತೆಯನ್ನು ಕಸಿದು ಬೇರೆಯವರಿಗೆ ದೊರಕಿಸುವ ಷಡ್ಯಂತ್ರವೂ ನಡೆಯುತ್ತಿದೆ. ಸಚಿವ ತಿಮ್ಮಾಪುರ ಅವರು ಇಲಾಖೆಯಲ್ಲಿ ರಚನಾತ್ಮಕ ಕೆಲಸ ಮಾಡುತ್ತಿದ್ದಾರೆ. ಪಾರದರ್ಶಕತೆಗೆ ಒತ್ತು ನೀಡಿದ್ದು, ಅಬಕಾರಿ ಪರವಾನಗಿಯಲ್ಲಿ ದಲಿತರಿಗೂ ಹೆಚ್ಚಿನ ಪ್ರಾತಿನಿಧ್ಯ ದೊರಕಿಸಿಕೊಡುತ್ತಿದ್ಧಾರೆ. ಇದನ್ನು ಸಹಿಸದೇ ಇಂತಹ ಷಡ್ಯಂತ್ರ ರೂಪಿಸಲಾಗಿದೆ ಎಂದರು.
ವ್ಯವಸ್ಥಿತವಾಗಿ ಲೋಕಾಯುಕ್ತರಿಂದ ಟ್ರ್ಯಾಪ್ ಮಾಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ. ಸಚಿವರ ಜೊತೆಗೆ ಅವರ ಉತ್ರ ವಿನಯ್ ಅವರ ಹೆಸರನ್ನು ಸಹ ಇದರಲ್ಲಿ ಸೇರಿಸಲಾಗಿದೆ. ವಿನಯ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರನ್ನು ಸಹ ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದರು.
ಈ ಬೆಳವಣಿಗೆ ಬಗ್ಗೆ ಸ್ವತಃ ಸಚಿವ ಆರ್.ಬಿ. ತಿಮ್ಮಾಪುರ ಅವರೇ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದು ಹೇಳಿದ್ಧಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಹಿಂದುಳಿದ, ದಲಿತ ಸಚಿವರ ಮೇಲೆ ಇಲ್ಲ, ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಸಚಿವ ಸ್ಥಾನದಿಂದ ವಂಚಿತರನ್ನಾಗಿ ಮಾಡಲು ಹುನ್ನಾರ ನಡೆಸಿದ್ದಾರೆ ಎಂದರು.
ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸಂಗಮೇಶ್, ಉಪಾಧ್ಯಕ್ಷ ಬಿ.ಮಂಜುನಾಥ್. ಪದಾಧಿಕಾರಿಗಳಾದ ಪ್ರಭುರಾವ್ ತಾಳಮಡಗಿ, ಪ್ರದೀಪ್ ಹೆಗ್ಡೆ, ಶಿವರಾಜ್ ದೊಡ್ಡಿ, ಸಿ. ಸುಂದರ್, ಜಿ.ಎಂ. ಬಬಲಾದ ಮತ್ತಿತರರು ಉಪಸ್ಥಿತರಿದ್ದರು.
BREAKING: ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ ಕೇಸ್: ಕಾಂಗ್ರೆಸ್ ಪಕ್ಷದಿಂದ ರಾಜೀವ್ ಗೌಡ ಅಮಾನತ್ತಿಗೆ ಶಿಫಾರಸ್ಸು
BREAKING: ರಾಜ್ಯದಲ್ಲಿ ವಾಹನಗಳ FC, ಸಾಗರೇತರ ನೋಂದಣಿ ನವೀಕರಣಕ್ಕೆ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ








