ಕೊಪ್ಪಳ: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಇಂದು ಕೊಪ್ಪಳದಲ್ಲಿ ಲೆವೆಲ್ ಕ್ರಾಸಿಂಗ್ (LC) 66ರ ಬದಲಿಗೆ ಹೊಸದಾಗಿ ನಿರ್ಮಿಸಲಾದ ರಸ್ತೆ ಮೇಲ್ಸೇತುವೆಯನ್ನು (ROB) ಉದ್ಘಾಟಿಸಿದರು. ಈ ಪ್ರಮುಖ ಮೂಲಸೌಕರ್ಯ ಯೋಜನೆಯನ್ನು 2018-19ನೇ ಸಾಲಿನಲ್ಲಿ ಮಂಜೂರಾಗಿದ್ದು, 44.28 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ, ಈ ರೈಲ್ವೆ ಸೇತುವೆಯು ಕುಷ್ಟಗಿ-ಕೊಪ್ಪಳ ಪ್ರದೇಶದ ನಿವಾಸಿಗಳಿಗೆ ಸುಗಮ ಸಂಪರ್ಕವನ್ನು ಹೆಚ್ಚಿಸುತ್ತದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ರೈಲ್ವೆ ಮೇಲ್ಸೇತುವೆ ಉದ್ಘಾಟನೆಯು ಕೊಪ್ಪಳ ಮತ್ತು ಕುಷ್ಟಗಿ ಜನತೆಯ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಹೇಳಿದರು. ಸಂಪರ್ಕ ಮತ್ತು ಮೂಲಸೌಕರ್ಯಗಳನ್ನು ಸುಧಾರಿಸಲು ಭಾರತೀಯ ರೈಲ್ವೆಯ ನಿರಂತರ ಬದ್ಧತೆಯನ್ನು ಅವರು ಒತ್ತಿ ಹೇಳಿದರು.
ಸೋಮಣ್ಣ ಅವರು ಗದಗ ಮತ್ತು ವಾಡಿ ನಡುವಿನ ಹೊಸ ರೈಲು ಮಾರ್ಗದ ಬಗ್ಗೆ ಮಾತನಾಡಿ, ಇದು ಪ್ರಸ್ತುತ ಕುಷ್ಟಗಿಯವರೆಗೆ ಕಾರ್ಯಾಪ್ರಗತಿಯಲ್ಲಿದ್ದು ಮತ್ತು ಪರಿಶೀಲನೆಯ ನಂತರ ಶೀಘ್ರದಲ್ಲೇ ಕಾರ್ಯನಿರ್ವಹಿಸಲಿದೆ ಎಂದರು. ಹೆಚ್ಚುವರಿಯಾಗಿ, ಗಿಣಿಗೇರಾ ಮತ್ತು ರಾಯಚೂರು ನಡುವಿನ ಮಾರ್ಗವು ಸಿಂಧನೂರುವರೆಗೆ ಪೂರ್ಣಗೊಂಡಿದೆ, ನಿಗದಿಪಡಿಸಿದ ಗುರಿಗಳ ಪ್ರಕಾರ ಪ್ರಗತಿ ಸಾಧಿಸಲಾಗುವುದು ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ದೇಶದ ಎಲ್ಲ ಲೆವಲ್ ಕ್ರಾಸಿಂಗಗಳನ್ನು ಬದಲಾಯಿಸಿ ಅಲ್ಲಿ ಜನಹಿತಕ್ಕಾಗಿ ಸುರಕ್ಷಿತ, ಸದೃಢ ರೈಲು ಸೇತುವೆಗಳನ್ನು ನಿರ್ಮಿಸಲಾಗುತ್ತದೆ ಎಂದು ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಹೇಳಿದರು.
ಕೊಪ್ಪಳ ನಗರದ ರೈಲ್ವೆ ಗೇಟ್ ಸಂಖ್ಯೆ 63 ರಲ್ಲಿ ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಜಿಲ್ಲೆಯ ರೈಲ್ವೆ ಗೇಟ್ ಗಳ ಸಂಖ್ಯೆ 72, 77 ಮತ್ತು 79 ರಲ್ಲಿ ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು. ಮತ್ತು ಬಾಗಲಕೋಟೆ-ಗಂಗಾವತಿ ಮತ್ತು -ದರೋಜಿ ನಡುವೆ ನೂತನ ರೈಲು ಮಾರ್ಗಗಳ ನಿರ್ಮಾಣ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಗಂಗಾವತಿ ಶಾಸಕರಾದ ಜಿ.ಜನಾರ್ದನ ರೆಡ್ಡಿ ಅವರು ಮಾತನಾಡಿ ಅಂಜನಾದ್ರಿ (ಗಂಗಾವತಿ) ಮತ್ತು ಅಯೋಧ್ಯೆ ನಡುವೆ ಹೊಸ ರೈಲು ಸೇವೆಯನ್ನು ಪರಿಚಯಿಸಲು ವಿನಂತಿಸಿದರು, ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಆ ರೈಲಿಗೆ “ಅಂಜನಾದ್ರಿ ಎಕ್ಸ್ ಪ್ರೆಸ್” ಹೆಸರಿಡಲು ಪ್ರಸ್ತಾಪಿಸಿದರು. ಗಂಗಾವತಿ ರೈಲ್ವೆ ನಿಲ್ದಾಣವನ್ನು ಅಂಜನಾದ್ರಿ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದರು.
ಭೇಟಿಯ ಭಾಗವಾಗಿ ವಿ.ಸೋಮಣ್ಣ ಅವರು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ (ABSS) ಅಭಿವೃದ್ಧಿ ಹೊಂದುತ್ತಿರುವ ಕೊಪ್ಪಳ ರೈಲ್ವೆ ನಿಲ್ದಾಣವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸೂಕ್ತ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ್ ಸೇರಿದಂತೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ,, ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕ ದೊಡ್ಡನಗೌಡ ಎಚ್.ಪಾಟೀಲ್,, ವಿಧಾನ ಪರಿಷತ್ ಸದಸ್ಯರು ಹೇಮಲತಾ ನಾಯಕ, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮತ್ತು ಹಿರಿಯ ರೈಲ್ವೆ ಅಧಿಕಾರಿಗಗಳಾದ ಹುಬ್ಬಳ್ಳಿ ವಿಭಾಗದ ಡಿಆರ್ ಎಂ ಬೇಲಾ ಮೀನಾ ಸೇರಿದಂತೆ ಅಜಯ್ ಶರ್ಮಾ, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ), ಬೆಂಗಳೂರು; ಮತ್ತು ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಅನೂಪ್ ದಯಾನಂದ್ ಸಾಧು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಸುವಿನ ಕೆಚ್ಚಲು ಕೊಯ್ದ ಘಟನೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ: ಆರ್.ಅಶೋಕ್ ಘೋಷಣೆ