ಚಿಕ್ಕಮಗಳೂರು: ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಬೀರೂರು ರೈಲು ನಿಲ್ದಾಣವನ್ನು ಪರಿಶೀಲಿಸಿ, ಶಿವನಿ ನಿಲ್ದಾಣದಲ್ಲಿ ಯಶವಂತಪುರ–ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ರೈಲು ಹೆಚ್ಚುವರಿ ನಿಲುಗಡೆಗಾಗಿ ಹಸಿರು ನಿಶಾನೆ ತೋರಿಸಿದರು.
ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಇಂದು ರೈಲು ಸಂಖ್ಯೆ 17309 ಯಶವಂತಪುರ–ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ರೈಲು ಶಿವನಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗಾಗಿ ಹಸಿರು ನಿಶಾನೆ ತೋರಿಸಿದರು. ಇದೇ ಸಂದರ್ಭದಲ್ಲಿ ಅವರು ಬೀರೂರು ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮತ್ತು ಸೌಲಭ್ಯಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ 61ಕ್ಕೂ ಹೆಚ್ಚು ಅಮೃತ ಭಾರತ ಸ್ಟೇಷನ್ ಯೋಜನೆ ಕಾಮಗಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು. ಇವು ಪ್ರಯಾಣಿಕರ ಸೌಲಭ್ಯಗಳನ್ನು ಹಾಗೂ ಮೂಲಸೌಕರ್ಯವನ್ನು ಪರಿವರ್ತಿಸುವ ಉದ್ದೇಶ ಹೊಂದಿವೆ ಎಂದು ಹೇಳಿದರು. ಅವರು ಚಿಕ್ಕಜಜೂರು–ಬಳ್ಳಾರಿ ದ್ವಿಪಥ (185 ಕಿ.ಮೀ.) ಕಾಮಗಾರಿ ₹3340 ಕೋಟಿಗಳ ವೆಚ್ಚದಲ್ಲಿ ಕಾರ್ಯಗತಗೊಳ್ಳುತ್ತಿದೆ ಎಂದು ತಿಳಿಸಿದರು. ಬೀರೂರು ಮತ್ತು ತಿಪಟೂರು ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಅವರು ಮುಂದುವರೆದು 97% ವಿದ್ಯುದೀಕರಣ ಕಾರ್ಯ ಪೂರ್ಣಗೊಂಡಿದ್ದು, ಉಳಿದ 100% ಕಾರ್ಯವನ್ನು 2025ರ ಡಿಸೆಂಬರ್ ಒಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು. 644 ಲೆವೆಲ್ ಕ್ರಾಸಿಂಗ್ ಬದಲಿಗೆ ರಸ್ತೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಸೋಮಣ್ಣ ಅವರು ವಿಕಲಚೇತನ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ನೀಡಲು ಮತ್ತು ಎಲ್ಲಾ ಪ್ರಯಾಣಿಕರಿಗೆ ಸುಧಾರಿತ ಸೌಲಭ್ಯಗಳನ್ನು ಒದಗಿಸಲು ಭಾರತೀಯ ರೈಲ್ವೆ ಬದ್ಧವಾಗಿದೆ ಎಂದು ಹೇಳಿದರು. “ಒನ್ ಸ್ಟೇಶನ್, ಒನ್ ಪ್ರಾಡಕ್ಟ್” ಯೋಜನೆಯಡಿ 89 ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಕಲೆಗಾರರು ಮತ್ತು ಉತ್ಪಾದಕರಿಗೆ ಪ್ರೋತ್ಸಾಹ ನೀಡಲು ಮಳಿಗೆಗಳನ್ನು ತೆರೆಯಲಾಗಿದೆ ಎಂದರು.
ಭದ್ರತೆ ಭಾರತೀಯ ರೈಲ್ವೆಯ ಅತಿ ಮುಖ್ಯ ಆದ್ಯತೆಯಾಗಿದೆ ಎಂದು ಪುನರುಚ್ಚರಿಸಿದರು. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ‘ಕವಚ್’ — ಸ್ವಯಂ ಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆ ಯನ್ನು ಅಳವಡಿಸಲಾಗುತ್ತಿದ್ದು, ಸುರಕ್ಷಿತ ರೈಲು ಸಂಚಾರಕ್ಕಾಗಿ ಇದು ಸಹಾಯಕವಾಗಲಿದೆ ಎಂದು ಹೇಳಿದರು.
ಯಶವಂತಪುರ–ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ರೈಲನ್ನು ಶಿವನಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯಿಂದ ಶಿವನಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಪ್ರಯಾಣಿಕರು ನೇರ ಸಂಪರ್ಕವನ್ನು ಪಡೆಯಲಿದ್ದು, ಬೆಂಗಳೂರು, ಹುಬ್ಬಳ್ಳಿ, ಗೋವಾ ಮುಂತಾದ ಪ್ರಮುಖ ಸ್ಥಳಗಳಿಗೆ ಸುಲಭ ಪ್ರಯಾಣ ಸಾಧ್ಯವಾಗಲಿದೆ. ಇದರಿಂದ ಪ್ರಾದೇಶಿಕ ಸಂಚಾರ ಮತ್ತು ಸಂಪರ್ಕತೆ ಸುಧಾರಣೆ ಆಗಲಿದೆ.
ಈ ಕಾರ್ಯಕ್ರಮದಲ್ಲಿ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಹೆಚ್. ಶ್ರೀನಿವಾಸ, ಸ್ಥಳೀಯ ಪ್ರತಿನಿಧಿಗಳು, ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್, ಹಿರಿಯ ರೈಲ್ವೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕರ್ನಾಟಕದಿಂದ ಬಿಹಾರಕ್ಕೆ ಮತದಾನಕ್ಕೆ ತೆರಳುವವರಿಗೆ ಮೂರು ದಿನ ರಜೆ: ಡಿಸಿಎಂ ಡಿ.ಕೆ ಶಿವಕುಮಾರ್ ಘೋಷಣೆ








