ನವದೆಹಲಿ: ಜಲಜೀವನ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದಂತೆ ಅನುಮೋದನೆ ನೀಡುವಂತೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ಅವರಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಕೋರಿದ್ದಾರೆ.
ನವದೆಹಲಿಯ ಜಲಶಕ್ತಿ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ಯೋಜನೆಯ ಮಹತ್ವದ ಕುರಿತು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದ ಖರ್ಗೆ, ಎರಡು ಜಿಲ್ಲೆಗಳ 1,672 ಜನವಸತಿಗಳ ಸುಮಾರು 31.67 ಲಕ್ಷ ನಿವಾಸಿಗಳಿಗೆ ಶುದ್ದ ಕುಡಿಯುವ ನೀರು ಒದಗಿಸುವ ಗುರಿ ಹೊಂದಲಾಗಿದೆ. ಸದರಿ ಯೋಜನೆಯ ಮೂಲಕ ಕಲಬುರಗಿ ಜಿಲ್ಲೆಯ 3,95,858 ಹಾಗೂ ಬೀದರ್ ಜಿಲ್ಲೆಯ 1,74,838 ಮನೆಗಳಿಗೆ ನಳಗಳ ಮೂಲಕ ನಿರಂತರ ಕುಡಿಯುವ ನೀರು ಒದಗಿಸಬಹುದಾಗಿದೆ ಎಂದರು.
ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳು ಅಭಿವೃದ್ದಿಗೆ ಸಹಕಾರಿಯಾಗುವ ಅಂಶಗಳನ್ನು ಹೊಂದಿದೆ ಆದರೆ ಜನರಿಗೆ ಕುಡಿಯುವ ನೀರು ಒದಗಿಸುವುದು ಸವಾಲಾಗಿ ಪರಿಣಮಿಸಿದೆ. ಸಮಗ್ರ ಅಧ್ಯಯನ ಮಾಡಲಾಗಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಜನರಿಗೆ ಕುಡಿಯುವ ನೀರು ಒದಗಿಸುವುದು ಸೂಕ್ತ ಎಂದು ಮನಗಂಡು ಈ ಯೋಜನೆಯ ಕುರಿತು ಯೋಚಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಸಚಿವರಿಗೆ ವಿವರಿಸಿದರು.
ಅಂದಾಜು ₹ 7,200 ಕೋಟಿ ವೆಚ್ಚದ ಈ ಯೋಜನೆಯ ಮೂಲಕ ಕುಡಿಯುವ ನೀರು ಒದಗಿಸುವುದರ ಜೊತೆಗೆ ಈ ಎರಡೂ ಜಿಲ್ಲೆಗಳ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಹಾಗಾಗಿ, ಈ ಯೋಜನೆಯ ಜಾರಿಗೆ ತಮ್ಮ ಸಹಕಾರ ಹಾಗೂ ಸಲಹೆಗಳು ಅಗತ್ಯವಾಗಿದ್ದು ಜಲಜೀವನ್ ಕಾರ್ಯಕ್ರಮದ ಮೂಲಕ ಗುರಿ ಸಾಧಿಸುವತ್ತ ನಾವು ಮುನ್ನಡೆಯಲಿದ್ದೇವೆ ಹಾಗೂ ಗ್ರಾಮೀಣ ಭಾಗದ ಜನರ ಜೀವನ ಮಟ್ಟ ಸುಧಾರಣೆಗೆ ದಿಟ್ಟ ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರವೇಜ್, ಗ್ರಾಮೀಣ ನೀರು ಸರಬರಾಜು ಇಲಾಖೆಯ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಹೀಗಿದೆ ಇಂದಿನ ಸಿಎಂ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಇಲಾಖೆ ಸಭೆಯ ಪ್ರಮುಖ ಹೈಲೈಟ್ಸ್
ವೈದ್ಯಕೀಯ ಪದವಿ ಇಲ್ಲದೇ ವೃತ್ತಿ ಮಾಡುತ್ತಿದ್ದ 6 ಜನರಿಗೆ 1 ಲಕ್ಷ ರೂ.ದಂಡ, ಒಬ್ಬರ ವಿರುದ್ದ FIR ದಾಖಲು