ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೈಋತ್ಯ ರೈಲ್ವೆಯ ಕೇಂದ್ರ ಕಚೇರಿ ರೈಲ್ ಸೌಧದಲ್ಲಿ ಇಂದು ಪ್ರಧಾನ ವ್ಯವಸ್ಥಾಪಕರೊಂದಿಗೆ ರೈಲ್ವೆ ಯೋಜನೆಗಳ ಪರಿಶೀಲನೆ ನಡೆಸಿದರು.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ ಜೋಶಿ ಅವರು ಇಂದು ಹಬ್ಬಳ್ಳಿಯ ರೈಲ್ ಸೌಧದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರರೊಂದಿಗೆ ಚಾಲ್ತಿಯಲ್ಲಿರುವ ಹಾಗೂ ಪ್ರಸ್ತಾವಿತ ರೈಲ್ವೆ ಯೋಜನೆಗಳ ಪರಿಶೀಲನಾ ಸಭೆಯನ್ನು ನಡೆಸಿದರು.
ಸಭೆಗೆ ಹಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ್ ತೆಂಗಿನಕಾಯಿ, ಹಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾನ್ಯ ಮೇಯರ್ ಜ್ಯೋತಿ ಪಾಟೀಲ, ಆಯುಕ್ತರಾದ ರುದ್ರೇಶ್ ಗಾಳಿ, ಸಹಾಯಕ ಆಯುಕ್ತರಾದ ವಿಜಯ್ ಕುಮಾರ್, ಹಬ್ಬಳ್ಳಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೆಲಾ ಮೀನಾ, ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ಹಿರಿಯ ಅಧಿಕಾರಿಗಳು ಹಾಗೂ ನೈಋತ್ಯ ರೈಲ್ವೆಯ ಮುಖ್ಯ ವಿಭಾಗಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಚಿವರು ಕರ್ನಾಟಕದ ಪ್ರಮುಖ ರೈಲ್ವೆ ಯೋಜನೆಗಳಾದ ಹುಬ್ಬಳ್ಳಿ–ಅಂಕೋಲಾ ಹೊಸ ಮಾರ್ಗ, ತುಮಕೂರು–ಚಿತ್ರದುರ್ಗ ಹೊಸ ಮಾರ್ಗ, ಧಾರವಾಡ–ಬೆಳಗಾವಿ ಹೊಸ ಮಾರ್ಗ, ಬಾಗಲಕೋಟೆ–ಕುಡಚಿ ಹೊಸ ಮಾರ್ಗ, ಗಡಗ–ವಾಡಿ ಹೊಸ ಮಾರ್ಗಗಳು ಹಾಗೂ ಪ್ರಗತಿಯಲ್ಲಿರುವ ರಸ್ತೆ ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿದರು. ಹೆಚ್ಚುವರಿಯಾಗಿ, ಡಿಸೆಂಬರ್ 2025ರೊಳಗೆ ರೈಲ್ವೆ ಮಂಡಳಿಗೆ ಸಲ್ಲಿಸಲಿರುವ ಗಡಗ–ಯಳವಿಗಿ ಹೊಸ ಮಾರ್ಗದ DPR ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು. ಇದರ ಜೊತೆಗೆ, ರೂ. 397 ಕೋಟಿ ವೆಚ್ಚದ ಹುಬ್ಬಳ್ಳಿ ನಿಲ್ದಾಣ ಪುನರಾಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಸುಮಾರು ರೂ. 17,000 ಕೋಟಿ ವೆಚ್ಚದ ಹುಬ್ಬಳ್ಳಿ–ಅಂಕೋಲಾ ಹೊಸ ಮಾರ್ಗ ಯೋಜನೆಯ DPR ವಿವರಗಳನ್ನೂ ಅವರು ಪರಿಶೀಲಿಸಿದರು.
ಮಾನ್ಯ ಸಚಿವರು 2025ರಲ್ಲಿ ನೈಋತ್ಯ ರೈಲ್ವೆಯ ಹೊಸ ಮಾರ್ಗ ನಿರ್ಮಾಣ, ರೈಲು ದ್ವಿಪಥಿಕರಣ ಹಾಗೂ ರಸ್ತೆ ಮೇಲ್ಸೇತುವೆ (ROB) ಮತ್ತು ರಸ್ತೆ ಕೆಳಸೇತುವೆ (RUB) ಕಾಮಗಾರಿಗಳ ಸಾಧನೆಗಳನ್ನು ಪರಿಶೀಲಿಸಿದರು. ರೈಲ್ವೆ ಅಭಿವೃದ್ಧಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸುವ ಅಗತ್ಯವನ್ನು ಸಚಿವರು ಒತ್ತಿ ಹೇಳಿ, ಯಾವುದೇ ಅಡೆತಡೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರದಿಂದ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ಇದಲ್ಲದೆ, ಸಚಿವರು ಅಳನಾವರ (₹17.2 ಕೋಟಿ), ಬಾದಾಮಿ (₹15.1 ಕೋಟಿ), ಕೊಪ್ಪಳ (₹21.14 ಕೋಟಿ) ಮತ್ತು ಬಂಟ್ವಾಳ (₹26.18 ಕೋಟಿ) ರೈಲು ನಿಲ್ದಾಣಗಳಲ್ಲಿ ಅಮೃತ ಭಾರತ ಸ್ಟೇಷನ್ ಯೋಜನೆ (ABSS) ಅಡಿಯಲ್ಲಿ ನಡೆಯುತ್ತಿರುವ ಪ್ರಗತಿಯನ್ನು ಪರಿಶೀಲಿಸಿದರು.
ಸಚಿವರು ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಂಡಿರುವ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾಥುರ್ ಅವರು ಸಚಿವರ ಮಾರ್ಗದರ್ಶನವನ್ನು ಅನುಸರಿಸಲಾಗುವುದು ಎಂದು ಭರವಸೆ ನೀಡಿ, ಕರ್ನಾಟಕ ಹಾಗೂ ಈ ಪ್ರದೇಶದ ಹಿತಕ್ಕಾಗಿ ಅಭಿವೃದ್ಧಿ ಯೋಜನೆಗಳನ್ನು ಸಮಯಕ್ಕೆ ಪೂರ್ಣಗೊಳಿಸುವ ನೈಋತ್ಯ ರೈಲ್ವೆಯ ಬದ್ಧತೆಯನ್ನು ಪುನರುಚ್ಚರಿಸಿದರು.
BREAKING : ಶೀಘ್ರದಲ್ಲೇ ಮದುವೆ ಆಗ್ತೀನಿ : ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್