ಬೆಂಗಳೂರು: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಹಿಂದೆ ಬಿಜೆಪಿ ಜತೆ, ಆಮೇಲೆ ಕಾಂಗ್ರೆಸ್ ಜೊತೆ ಸೇರಿಕೊಂಡು ಸರಕಾರ ರಚಿಸಿ, ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. ಈಗ ಪುನಃ ಬಿಜೆಪಿ ಜೊತೆ ಹೋಗಿದ್ದಾರೆ. ಅವರದು ಅವಕಾಶವಾದಿ ಮೈತ್ರಿ. ಅವರು ತಮ್ಮ ಸರಕಾರವನ್ನೇ ಉಳಿಸಿಕೊಳ್ಳಲಿಲ್ಲ. ಈಗ ನಮ್ಮ ಸರಕಾರವನ್ನು ಉರುಳಿಸುವ ಮಾತುಗಳನ್ನು ಆಡುತ್ತಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಟೀಕಿಸಿದ್ದಾರೆ.
ಭಾನುವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಮೊದಲು ಪಾದಯಾತ್ರೆಗೆ ತಮ್ಮ ನೈತಿಕ ಬೆಂಬಲವೂ ಇಲ್ಲ ಎಂದರು. ಆಮೇಲೆ ಯಾರದೋ ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಪಾದಯಾತ್ರೆಗೆ ಹೋಗಿದ್ದಾರಷ್ಟೆ ಎಂದು ಅವರು ಕುಟುಕಿದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ಯಾವ ತಪ್ಪೂ ಇಲ್ಲ. ಸ್ವತಃ ಮುಡಾ ತಪ್ಪು ಮಾಡಿ, ಅದನ್ನು ಒಪ್ಪಿಕೊಂಡಿದೆ. ನಿಯಮಗಳಂತೆಯೇ ಸಿಎಂ ಪತ್ನಿಗೆ ಬದಲಿ ನಿವೇಶನಗಳನ್ನು ಅದು ಕೊಟ್ಟಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್ ಅವರು ಸಚಿವರ ಸಭೆ ಕರೆದಿರುವುದರಲ್ಲಿ ತಪ್ಪೇನೂ ಇಲ್ಲ. ಪಕ್ಷದ ಹಿತದೃಷ್ಟಿಯಿಂದ ಅವರು ನಮಗೆ ಸಲಹೆ ಕೊಡಬಹುದಷ್ಟೆ. ಇದಕ್ಕಿಂತ ಹೆಚ್ಚು ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಪೊಲೀಸ್ ಎಸ್ಐ ಒಬ್ಬರು ಸತ್ತಿರುವುದರ ಹಿಂದೆ ಅಲ್ಲಿನ ಕಾಂಗ್ರೆಸ್ ಶಾಸಕರ ಕೈವಾಡವೇನೂ ಇಲ್ಲ. ಈಗ ಪ್ರತಿಯೊಂದಕ್ಕೂ ಶಾಸಕರು ಮತ್ತು ಮಂತ್ರಿಗಳನ್ನು ದೂರುವುದು ಒಂದು ಕಾಯಿಲೆಯಾಗಿದೆ ಎಂದು ಸಚಿವರು ಬೇಸರ ಹೊರಹಾಕಿದರು.
‘ಬಿಎಸ್ ಯಡಿಯೂರಪ್ಪ’ ಮುಂದೆ ಈ ಪ್ರಶ್ನೆಗಳನ್ನಿಟ್ಟ ‘ಮಾಜಿ MLC ರಮೇಶ್ ಬಾಬು’: ಉತ್ತರಿಸ್ತಾರಾ ‘BSY’?