ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2025-26ನೇ ಸಾಲಿನ ಬಜೆಟ್ ನಿರಾಶದಾಯಕವಾದ ಬಜೆಟ್ ಆಗಿದ್ದು, ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ ಎಂಬುದಾಗಿ ಸಚಿವ ಶಿವರಾಜ್ ತಂಡರಗಿ ಹೇಳಿದ್ದಾರೆ.
ಇಂದು ಕೇಂದ್ರ ಬಜೆಟ್ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಗ್ರಾಮೀಣ ಭಾಗದಲ್ಲಿ ಯಾರ ಬಳಿಯೂ ಹಣವಿಲ್ಲ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರು ಕಣ್ಣೀರು ಹಾಕುವಂತಾಗಿದೆ. ವಿಪರ್ಯಾಸವೆಂದರೆ ದೇಶದಲ್ಲಿ ಅಂದಾಜು ಶೇ.45ರಿಂದ 50ರಷ್ಟು ನಿರುದ್ಯೋಗ ತಾಂಡವವಾಡುತ್ತಿದೆ. ಆದರೆ ಉದ್ಯೋಗ ಸೃಷ್ಟಿ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದು ನಿಜಕ್ಕೂ ನಮ್ಮ ದುರ್ದೈವ ಎಂದಿದ್ದಾರೆ.
ನಮ್ಮರಾಜ್ಯಗಳಿಗೆ ಅನ್ಯಾಯ
ಬಜೆಟ್ ನಿಂದ ಸಣ್ಣ ಕೈಗಾರಿಕೆಗಳಿಗೆ ಯಾವುದೇ ಅನುಕೂಲವಾಗಿಲ್ಲ. ರೈಲ್ವೆ, ಶಿಕ್ಷಣ, ಮೂಲಸೌಲಭ್ಯ ಯೋಜನೆಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಇದು ರೈತರ, ಮಹಿಳೆಯರ, ದಲಿತರ ವಿರೋಧಿ ಬಜೆಟ್ ಆಗಿದೆ. ಅಕ್ಟೋಬರ್ ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಹಾರ ರಾಜ್ಯಕ್ಕೆ ವಿಶೇಷವಾದ ಯೋಜನೆಗಳನ್ನು ಘೋಷಿಸುವ ಮೂಲಕ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವರು ಬಿಹಾರ ರಾಜ್ಯದ ಜಪಾ ಮಾಡಿದ್ದಾರೆ ಎಂಬುದಾಗಿ ಕಿಡಿಕಾರಿದ್ದಾರೆ.
ಕೇಂದ್ರದಿಂದ ನಾವು ಏನನ್ನು ನಿರೀಕ್ಷೆ ಮಾಡಿರಲಿಲ್ಲ. ಈ ಹಿಂದೆ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5330 ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಇಲ್ಲಿ ತನಕ ನಯಾಪೈಸೆ ನೀಡಿಲ್ಲ. ನಮಗೆ ಕೊಡಬೇಕಾದ ನ್ಯಾಯಯುತವಾದ ತೆರಿಗೆ ಪಾಲಿನ ಹಣವನ್ನೇ ಕೇಂದ್ರ ನೀಡುತ್ತಿಲ್ಲ. ಇಂತಹವರಿಂದ ನಾವು ಏನನ್ನು ನಿರೀಕ್ಷೆ ಮಾಡಲು ಸಾಧ್ಯ? ಒಟ್ಟಾರೆ ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂಬುದಾಗಿ ಆಕ್ರೋಶವನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದ್ದಾರೆ.