ಬೆಂಗಳೂರು : ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇನ್ನು ಮುಂದೆ ಏಕೀಕೃತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ನಗರಾಭಿವೃದ್ಧಿ, ಮೂಲಸೌಕರ್ಯ, ಕುಡಿಯುವ ನೀರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ನಗರಾಭಿವೃದ್ಧಿ ಹಾಗೂ ಆಸ್ತಿ ನಿರ್ವಹಣೆ
ಏಕೀಕೃತ ಆಸ್ತಿ ತೆರಿಗೆ: ಇ-ಆಸ್ತಿ ತಂತ್ರಾಂಶದೊಂದಿಗೆ ಸಂಯೋಜಿಸಿ ಸ್ವಯಂ ಚಾಲಿತವಾಗಿ ತೆರಿಗೆ ಬೇಡಿಕೆ ಸೃಜಿಸುವ ‘ಯೂನಿಫೈಡ್ ಪ್ರಾಪರ್ಟಿ ಟ್ಯಾಕ್ಸ್’ (Unified Property Tax) ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.
ಹೊಸ ನಿಯಮ ಜಾರಿ: ನಗರ ಸ್ಥಳೀಯ ಸಂಸ್ಥೆಗಳ ಸ್ಥಿರಾಸ್ತಿಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ವಹಣಾ ಪ್ರಕ್ರಿಯೆಯನ್ನು ಸರಳಗೊಳಿಸಲು ‘ದಿ ಎಸ್ಟೇಟ್ ಮ್ಯಾನೇಜ್‌ಮೆಂಟ್ ರೂಲ್ಸ್-2026’ ಅನ್ನು ಜಾರಿಗೆ ತರಲಾಗುತ್ತಿದೆ.
ಅಮೃತ್ ನಗರೋತ್ಥಾನ: ಮುಖ್ಯಮಂತ್ರಿ ಅಮೃತ್ ನಗರೋತ್ಥಾನ ಯೋಜನೆಯಡಿ (ಹಂತ-4) ಮೂಲಸೌಕರ್ಯ ಅಭಿವೃದ್ಧಿಗೆ ಈ ಸಾಲಿನಲ್ಲಿ ₹500 ಕೋಟಿ ಅನುದಾನ ಮೀಸಲಿಡಲಾಗಿದೆ.
ಮೂಲಸೌಕರ್ಯ ಮತ್ತು ಕುಡಿಯುವ ನೀರು
ಬೆಂಗಳೂರಿಗೆ ಭರ್ಜರಿ ಅನುದಾನ: ರಾಜಧಾನಿಯ ರಸ್ತೆ ಹಾಗೂ ಇತರೆ ಮೂಲಸೌಕರ್ಯಗಳಿಗೆ ₹5000 ಕೋಟಿಗೂ ಹೆಚ್ಚಿನ ಅನುದಾನ ನೀಡಲಾಗಿದೆ. ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಬಿಎಂಆರ್‌ಡಿಎ ಹಾಗೂ ಸ್ಥಳೀಯ ಪ್ರಾಧಿಕಾರಗಳ ಮೂಲಕ ನೆಲಮಂಗಲ-ತಾವರೆಕೆರೆ-ಬಿಡದಿ ಮಧ್ಯಂತರ ವರ್ತುಲ ರಸ್ತೆ ನಿರ್ಮಾಣ.
ಕಲಬುರಗಿಗೆ ಶಾಶ್ವತ ಶುದ್ಧ ನೀರು: ಕಲಬುರಗಿ ನಗರಕ್ಕೆ 24/7 ಶಾಶ್ವತವಾಗಿ ಗುಣಮಟ್ಟದ ಕುಡಿಯುವ ನೀರು ಒದಗಿಸಲು ₹1,863 ಕೋಟಿ ವೆಚ್ಚದ ಬೃಹತ್ ಯೋಜನೆ.
ಒಳಚರಂಡಿ ಕಾಮಗಾರಿಗಳು: ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಅನ್ನಿಗೇರಿ, ಗುಂಡ್ಲುಪೇಟೆ, ನೆಲಮಂಗಲ, ದೊಡ್ಡಬಳ್ಳಾಪುರ, ಭದ್ರಾವತಿ, ದೇವನಹಳ್ಳಿ ಮತ್ತು ಮೈಸೂರಿನ ಕೆಲವು ಭಾಗಗಳಲ್ಲಿ ಒಳಚರಂಡಿ ಕಾಮಗಾರಿ. ಕಲ್ಯಾಣ ಕರ್ನಾಟಕ ಮಂಡಳಿಯ ಅನುದಾನದಲ್ಲಿ ಆಳಂದ, ಅಫ್ಜಲ್‌ಪುರ, ಚಿತ್ತಾಪುರ ಸೇರಿ ಹಲವೆಡೆ ಕಾಮಗಾರಿ.
ವಿದ್ಯಾರ್ಥಿಗಳಿಗೆ ಹಾಗೂ ಪರಿಸರಕ್ಕೆ ಆದ್ಯತೆ
ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್: ಉನ್ನತ ವ್ಯಾಸಂಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಧಾರವಾಡದಲ್ಲಿ 4 ಹಾಗೂ ಬೆಂಗಳೂರಿನಲ್ಲಿ 2 ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ಗಳ ಆರಂಭ.
ಮಿಯಾವಾಕಿ ಉದ್ಯಾನವನ: ರಾಜ್ಯದ ನಗರ ಪ್ರದೇಶಗಳಲ್ಲಿ ಸ್ಥಳೀಯ ಸಸ್ಯಗಳನ್ನು ದಟ್ಟವಾಗಿ ಬೆಳೆಸಿ ನೈಸರ್ಗಿಕ ಹಸಿರು ಹೆಚ್ಚಿಸಲು 100 ‘ಮಿಯಾವಾಕಿ ಪಾರ್ಕ್’ಗಳ ನಿರ್ಮಾಣ.
ಇತರೆ ಪ್ರಮುಖ ಅನುದಾನಗಳು
ಮೈಸೂರು, ಬೀದರ್ ಮತ್ತು ಹಾಸನ ಮಹಾನಗರ ಪಾಲಿಕೆಗಳಿಗೆ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ-2.0 ಅಡಿ ತಲಾ ₹200 ಕೋಟಿ ಅನುದಾನ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ₹100 ಕೋಟಿ ಅನುದಾನ.








