ಬೆಂಗಳೂರು: ಬುದ್ಧಿ ಕಡಿಮೆ ಇರುವ ರಾಹುಲ್ ಗಾಂಧಿಯವರ ಪಾದಯಾತ್ರೆಗೆ ಯಾವ ನಿಯಮದಡಿ ಅವಕಾಶ ನೀಡುತ್ತಾರೆ? ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಪ್ರಶ್ನೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆದಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಚುನಾವಣೆಯಲ್ಲಿ ಅಕ್ರಮ ಆಗಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಬಹುದು ಎಂಬ ಕಾಮನ್‌ಸೆನ್ಸ್ ರಾಹುಲ್ ಗಾಂಧಿಗೆ ಇಲ್ಲ. ಅದಕ್ಕಾಗಿಯೇ ಅವರು ರಾಜ್ಯಕ್ಕೆ ಬಂದು ಪಾದಯಾತ್ರೆ ಮಾಡುತ್ತಿದ್ದಾರೆ. ಯಾವುದೇ ಯಾತ್ರೆಗೆ ಅನುಮತಿ ನೀಡಬಾರದು ಎಂದು ಕೋರ್ಟ್ ಆದೇಶ ಇರುವಾಗ ಅನುಮತಿ ಹೇಗೆ ನೀಡುತ್ತಾರೆ? ಅನುಮತಿ ನೀಡಿದರೆ ಬಿಜೆಪಿಯಿಂದ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಇಂದಿರಾಗಾಂಧಿ ಚುನಾವಣಾ ಅಕ್ರಮ ಮಾಡಿ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದರು. ಇಂತಹ ಪಕ್ಷಕ್ಕೆ ಚುನಾವಣಾ ಅಕ್ರಮದ ಬಗ್ಗೆ ಆರೋಪ ಮಾಡಲು ಯಾವ ನೈತಿಕ ಅಧಿಕಾರವಿದೆ. ರಾಹುಲ್ ಗಾಂಧಿಗೆ ಬುದ್ಧಿ ಕಡಿಮೆ ಇದೆ. ಆದ್ದರಿಂದಲೇ ಚುನಾವಣಾ ಆಯೋಗದ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಬಿಜೆಪಿಗೆ ಪಾದಯಾತ್ರೆಗೆ ಅವಕಾಶ ನೀಡುತ್ತಿಲ್ಲ. ಅಂದಮೇಲೆ ಅವರಿಗೂ ಅವಕಾಶ ನೀಡಬಾರದು ಎಂದರು.
‘ಕೈ’ಲಾಗದವನು ಮೈಪರಚಿಕೊಂಡ ಎಂಬಂತೆ ಕೈಲಾಗದ ರಾಹುಲ್ ಗಾಂಧಿ ಚುನಾವಣಾ ಪ್ರಕ್ರಿಯೆ ಬಗ್ಗೆ ಕ್ಯಾತೆ ತೆಗೆಯುತ್ತಿದ್ದಾರೆ. ಮೂರು ಲೋಕಸಭಾ ಚುನಾವಣೆಗಳಲ್ಲಿ ಮೂರಂಕಿ ದಾಟಲಾಗದೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಮುಳುಗಿಸಿ ಸೋತು ಸುಣ್ಣವಾಗಿರುವ ಬಾಲಕ ಬುದ್ಧಿ ರಾಹುಲ್ ಗಾಂಧಿ ಅವರು ಈಗ ಕರ್ನಾಟಕದಲ್ಲಿ ಚುನಾವಣಾ ಆಯೋಗದ ವಿರುದ್ಧ ಪಾದಯಾತ್ರೆ ಮಾಡಲಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಈ ಪಾದಯಾತ್ರೆ? ಹರಿಯಾಣ, ಮಹಾರಾಷ್ಟ್ರ, ದೆಹಲಿ ನಂತರ ಈಗ ಬಿಹಾರದಲ್ಲೂ ಹೀನಾಯ ಸೋಲಿನ ಮುನ್ಸೂಚನೆ ಸಿಕ್ಕಿದೆಯೇ? ಇಷ್ಟಕ್ಕೂ ಇವರಿಗೆ ಕರ್ನಾಟಕ ಈಗ ನೆನಪಾಯಿತೇ? ಕಳೆದ 24 ತಿಂಗಳಲ್ಲಿ 2,000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾದಾಗ ಬರಲಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿ ಪೂರೈಕೆಯಿಂದ 500ಕ್ಕೂ ಹೆಚ್ಚು ಗರ್ಭಿಣಿ, ಬಾಣಂತಿ ಮಹಿಳೆಯರು, ನವಜಾತ ಶಿಶುಗಳು ಮರಣ ಹೊಂದಿದಾಗ ಬರಲಿಲ್ಲ. ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ 50ಕ್ಕೂ ಹೆಚ್ಚು ಬಡವರು ಆತ್ಮಹತ್ಯೆ ಮಾಡಿಕೊಂಡಾಗ ಬರಲಿಲ್ಲ. ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಸರ್ಕಾರದ ಎಡವಟ್ಟಿನಿಂದ 11 ಜನ ಅಮಾಯಕ ಯುವಕರು ಸತ್ತಾಗ ಬರಲಿಲ್ಲ. ನಾಳೆ ಎದುರಾಗಲಿರುವ ಬಿಹಾರ ಚುನಾವಣಾ ಸೋಲಿಗೆ ಕುಂಟು ನೆಪ ಸೃಷ್ಟಿಸಿ ತಮ್ಮ ಅಸಾಮರ್ಥ್ಯಕ್ಕೆ, ವೈಫಲ್ಯಕ್ಕೆ anticipatory bail ತೆಗೆದುಕೊಳ್ಳೋಕೆ ಬರುತ್ತಿದ್ದೀರಲ್ಲ, ನಿಮ್ಮ ಕಾಂಗ್ರೆಸ್ ಪಕ್ಷದ ಲಜ್ಜೆಗೇಡಿತನಕ್ಕೆ ಕನ್ನಡಿಗರು ರೋಸಿ ಹೋಗಿದ್ದಾರೆ. ಅದ್ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಿದ್ದೀರೋ ಎಂದು ಆರ್.ಅಶೋಕ ಪ್ರಶ್ನೆ ಮಾಡಿದರು.
ಸಿಎಂ ಸಿದ್ದರಾಮಯ್ಯ ಪವರ್ ತೋರಿಸಲು ಡಿ.ಕೆ.ಶಿವಕುಮಾರ್ ಅವರನ್ನು ಸಭೆಗೆ ಆಹ್ವಾನಿಸಿಲ್ಲ. ಕಾಂಗ್ರೆಸ್ ಶಾಸಕರ ಬೆಂಬಲ ಡಿಕೆಶಿಗೆ ಇಲ್ಲವೆಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಆದ್ದರಿಂದಲೇ ಆ ಸಭೆಗೆ ಅವರನ್ನು ಕರೆದಿಲ್ಲ. ಎರಡು ವರ್ಷದಿಂದ ಏನೂ ಕೊಡದೆ ಈಗ 50 ಕೋಟಿ ನೀಡಿದರೆ ಪ್ರಯೋಜನವಿಲ್ಲ. ಅದರಲ್ಲೂ ಸಿದ್ದರಾಮಯ್ಯನವರ ಬೆಂಬಲಿಗ ಶಾಸಕರಿಗೆ ಮಾತ್ರ 50 ಕೋಟಿ ರೂ. ನೀಡಲಾಗುತ್ತಿದೆ. ಬಿಜೆಪಿ ಶಾಸಕರಿಗೂ 50 ಕೋಟಿ ರೂ. ನೀಡಬೇಕೆಂದು ಆಗ್ರಹಿಸಲಾಗುವುದು ಎಂದರು.
ಸಿಎಂ ಸಿದ್ದರಾಮಯ್ಯ ಎಲ್ಲ ವರ್ಗಗಳ ನಾಯಕರಾಗಿ ಉಳಿದಿಲ್ಲ. ಅವರು ಸ್ವಹಿತಾಸಕ್ತಿ ನೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಬೆಳೆದಿದೆ. ಸಿದ್ದರಾಮಯ್ಯನವರಿಗೆ ಅಧಿಕಾರಿಗಳ ಮೇಲೆ ಹಾಗೂ ಶಾಸಕರ ಮೇಲೆ ಹಿಡಿತವಿಲ್ಲ. ಅಭಿವೃದ್ಧಿ ಬಗ್ಗೆ ಸರ್ಕಾರ ಯೋಚಿಸುತ್ತಿಲ್ಲ. ರಸಗೊಬ್ಬರ ವಿತರಣೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
BIG NEWS: ಧರ್ಮಸ್ಥಳದಲ್ಲಿ ಕಳೇಬರ ಶೋಧ ವೇಳೆ ಮಹತ್ವದ ಕುರುಹು ಪತ್ತೆ: ಸೋಷಿಯಲ್ ಮೀಡಿಯಾದಲ್ಲಿ ‘ಪ್ರೆಸ್ ನೋಟ್ ವೈರಲ್’
ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ