ಬೆಂಗಳೂರು: ಒಂದು ರೀತಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿಧಾನಸೌಧದ ಮಹಾದ್ವಾರಕ್ಕೆ ಬೀಗ ಹಾಕಿದ್ದಾರೆ. ಶಾಸಕರು ವಿಧಾನಸೌಧದ ಒಳಗೆ ಹೋಗಲು ಅವಕಾಶ ಕೊಡುವುದಿಲ್ಲ. ಯಾಕೆ ನಮಗೆ ಅಧಿಕಾರ ಇಲ್ಲವೇ ಹಾಗಿದ್ದರೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ನಮ್ಮ ಕಾರ್ಯಕರ್ತರು ಹೋರಾಟ ಮಾಡಿದರೆ ಅವರ ಮೇಲೆ ಲಾಠಿಪ್ರಹಾರ ಮಾಡುತ್ತಾರೆ. ಒಟ್ಟಾರೆಯಾಗಿ ಅಧಿಕಾರದ ಅಮಲಿನಲ್ಲಿ ಇರುವ ಈ ರಾಜ್ಯ ಸರಕಾರವು ದರ್ಪದಿಂದ ನಡೆದುಕೊಳ್ಳುತ್ತಿದೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇವರಿಗೆ ಗಾಬರಿ ಆಗುತ್ತಿದೆ. ನರೇಂದ್ರ ಮೋದಿಯವರ ಹೆಸರು ಕೇಳಿದರೆ ಗಾಬರಿ ಆಗುತ್ತದೆ. ಜೈಶ್ರೀರಾಮ್ ಎಂದು ಕೂಗಿದರೂ ಕಾಂಗ್ರೆಸ್‍ನವರು ಪ್ರಜ್ಞೆ ತಪ್ಪಿ ಬೀಳುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಒಟ್ಟಾರೆಯಾಗಿ ಇವತ್ತು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಮುಖಂಡರ ಮೇಲೆ, ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಖಂಡನೀಯ ಎಂದರು. ರಾಜ್ಯದ ಅಧ್ಯಕ್ಷನಾಗಿ ಇದನ್ನು ಖಂಡಿಸುತ್ತೇನೆ. ಇವತ್ತು ರಾಜ್ಯದ ಜನರು, ರೈತರ ಪಾಲಿಗೆ ರಾಜ್ಯ ಸರಕಾರ ಇದ್ದೂ ಸತ್ತಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರಗಾಲದ ಸಂದರ್ಭದಲ್ಲಿ ಪೂರ್ವ ತಯಾರಿಯೂ ಇಲ್ಲ. ಭಿಕ್ಷೆ ಕೊಟ್ಟಂತೆ 2 ಸಾವಿರ ಕೊಡುವ ಘೋಷಣೆ ಮಾಡಿದ್ದು, ಅದನ್ನೂ ಸರಿಯಾಗಿ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ದೆಹಲಿಯಲ್ಲಿ ಶೋಕಿ ಮಾಡಲು ಪ್ರಚಾರ ಪಡೆಯಲು ಹೋಗಿದ್ದಾರೆ ಎಂದು ಟೀಕಿಸಿದರು.
ನರೇಂದ್ರ ಮೋದಿಯವರ ಕಳೆದ 10 ವರ್ಷಗಳ ಅವಧಿಯಲ್ಲಿ ನಮ್ಮ ಕರ್ನಾಟಕ ರಾಜ್ಯಕ್ಕೆ 2 ಲಕ್ಷ 80 ಸಾವಿರ ಕೋಟಿ ಅನುದಾನ ಬಂದಿದೆ. ಹಿಂದೆ ಯುಪಿಎ ಸರಕಾರ ಇದ್ದಾಗ, ಮನಮೋಹನ್ ಸಿಂಗ್ ಅವರ ಸರಕಾರ ಇದ್ದಾಗ ಕರ್ನಾಟಕಕ್ಕೆ ಕೇವಲ 80 ಸಾವಿರ ಕೋಟಿ ಹಣ ಲಭಿಸಿತ್ತು. ಇನ್ನೇನು ಅಂಕಿ ಅಂಶವನ್ನು ಮುಖ್ಯಮಂತ್ರಿಗಳಿಗೆ ಕೊಡಬೇಕು ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರವಾಗಿ ಕೇಳಿದರು.
ವಿಧಾನಸೌಧದ ದ್ವಾರಗಳಿಗೆ ಬೀಗ- ಆಕ್ರೋಶ
ವಿಧಾನಸೌಧದ ಎಲ್ಲ ದ್ವಾರಗಳಿಗೆ ಇಂದು ಬೀಗ ಹಾಕಲಾಗಿತ್ತು. ಇದರಿಂದ ಜನಪ್ರತಿನಿಧಿಗಳು ಒಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಈ ಕುರಿತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನಾಳೆ ರಾಜ್ಯ ಮಟ್ಟದ ‘ಜನತಾದರ್ಶನ’ ಕಾರ್ಯಕ್ರಮ: ‘ನೊಡಲ್ ಅಧಿಕಾರಿ’ಗಳ ನಿಯೋಜನೆ
BREAKING : ದೆಹಲಿ ಮದ್ಯ ಹಗರಣ : ಫೆ.17ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ‘ಸಿಎಂ ಕೇಜ್ರಿವಾಲ್’ಗೆ ಕೋರ್ಟ್ ಸಮನ್ಸ್