ಬೆಂಗಳೂರು : ಈಗೊಂದಷ್ಟು ವರ್ಷಗಳಿಂದ ಜಾಹೀರಾತು ಏಜೆನ್ಸಿಯ ಮೂಲಕ ಚಿರಪರಿಚಿತರಾಗಿರುವವರು ಸಂಜಯ್ ಧ್ರುವ. ಅವರೀಗ ವಿಭಿನ್ನವಾದ ರೂಪುರೇಷೆಗಳೊಂದಿಗೆ ‘ಕಲಾದ್ಯುತಿ ಪ್ರೊಡಕ್ಷನ್ ಹೌಸ್’ ಅನ್ನು ಶುರು ಮಾಡಿದ್ದಾರೆ.
ಇದರಲ್ಲಿ ಅವರು ನೃತ್ಯ, ನಾಟಕ ಸೇರಿದಂತೆ ಪ್ರದರ್ಶನ ಕಲೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುವುದು ಅವರ ಉದ್ದೇಶವಾಗಿದೆ.ಅಂದ ಹಾಗೇ ಈ ಹೊಸತನದ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಹಾಗು ಕನಸು ಈ ಸಂಸ್ಥೆಯ ಕನಸಾಗಿದೆ. ಸದ್ಯಕ್ಕೆ ಈ ಸಂಸ್ಥೆಯಿಂದ ಶ್ರೀ ಪರ್ವತವಾಣಿಯವರ ‘ಉಂಡಾಡಿ ಗುಂಡ’ ನಾಟಕದ ಪ್ರದರ್ಶನದ ಮೂಲಕವೇ ‘ಕಲಾದ್ಯುತಿ ಪ್ರೊಡಕ್ಷನ್ ಹೌಸ್’ ಮೊದಲ ಹೆಜ್ಜೆಯಿಡುತ್ತಿದ್ದು ಆ ಮೂಲಕ ತಮ್ಮ ಪ್ರಯಾಣವನ್ನು ಶುರು ಮಾಡಿದ್ದಾರೆ.
ನಾಟಕ ರಚನೆಕಾರರಾಗಿ, ನಿರ್ದೇಶಕರಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಶ್ರೀ ಪರ್ವತವಾಣಿ, ಡಾ ರಾಜ್ ಕುಮಾರ್ ನಾಯಕರಾಗಿದ್ದ `ಭಾಗ್ಯದ ಲಕ್ಷ್ಮಿ ಬಾರಮ್ಮ’ ಚಿತ್ರದಲ್ಲಿ ನಟಿಸುವ ಮೂಲಕವೂ ಕೂಡ ಅವರು ಕಾಣಿಸಿಕೊಂಡಿದ್ದರು.
ಅಂಥಾ ಪರ್ವತವಾಣಿ ಅವರು ರಚಿಸಿದ್ದ ಹಾಸ್ಯ ನಾಟಕ ‘ಉಂಡಾಡಿ ಗುಂಡ’ ಜನಪ್ರಿಯತೆ ಮೇರು ಶಿಖರವನ್ನು ಮುಟ್ಟಿತ್ತು. ಅಂದ ಹಾಗೇ ಆ ನಾಟಕ ರಚನೆಗೆ ಇದೀಗ ಎಂಬತ್ತು ವರ್ಷ ತುಂಬಿದ ಸಂದರ್ಭದಲ್ಲಿ, ಪರ್ವತವಾಣಿ ಅವರಿಗೆ ಗೌರವ ಸಲ್ಲಿಸಬೇಕೆಂಬ ಕಲಾದ್ಯುತಿ ಪ್ರೊಡಕ್ಷನ್ ಹೌಸ್ ಆಶಯಕ್ಕೆ ಖುದ್ದು ಪರ್ವತವಾಣಿಯವರ ಮೊಮ್ಮಗ ಶರತ್ ಪರ್ವತವಾಣಿ ಜೊತೆಯಾಗಿದ್ದಾರೆ. ತಾತ ಬರೆದಿದ್ದ ಪ್ರಸಿದ್ಧ ನಾಟಕವನ್ನು ಮೊಮ್ಮಗ ಶರತ್ ನಿರ್ದೇಶನ ಮಾಡಲಿದ್ದಾರೆ.
‘ಉಂಡಾಡಿ ಗುಂಡ’ ನಾಟಕ ಇದೇ ಫೆಬ್ರವರಿ 24ರಂದು ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ನಂತರ ಫೆಬ್ರವರಿ 27ರಂದು ಯುವಪಥ ಜಯನಗರದಲ್ಲಿ, ಮಾರ್ಚ್ 7 ಬಿಪಿ ವಾಡಿಯಾ ಸಭಾಂಗಣದಲ್ಲಿ ಮತ್ತು ಮಾರ್ಚ್ 14ನೇ ತಾರೀಕಿನಂದು KEA ಪ್ರಭಾತ್ ಬಸವೇಶ್ವರನಗರದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಫೆಬ್ರವರಿ 24, ಮಾರ್ಚ್7 ಹಾಗೂ ಮಾರ್ಚ್ 14ರಂದು ನಡೆಯಲಿರುವ ಪ್ರದರ್ಶನಗಳಲ್ಲಿ ಜನಪ್ರಿಯ ನಟ ಸಿಹಿಕಹಿ ಚಂದ್ರು ಅವರು ನಟಿಸಲಿದ್ದಾರೆ.








