ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರೀಕ್ಷೆಯಂತೆ ಶನಿವಾರ ಪ್ರಕಟಿಸಿದ್ದು, ಕಾಲೇಜು ಪ್ರವೇಶ ಪ್ರಕ್ರಿಯೆಯನ್ನೂ ಆರಂಭಿಸಿದೆ.
ಇದೇ ಮೊದಲ ಬಾರಿಗೆ ಒಂದೊಂದು ಕೋರ್ಸ್‌ಗೂ ಪ್ರತೇಕವಾದ ಪ್ರವೇಶ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಆ ಪ್ರಕಾರ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಿ ಕಾಲೇಜುಗಳಿಗೆ ಪ್ರವೇಶ ಪಡೆಯಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಛಾಯ್ಸ್ ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಶನಿವಾರದಿಂದಲೇ ಆರಂಭವಾಗಿದೆ. ಛಾಯ್ಸ್-1 ಆಯ್ಕೆ ಮಾಡಿದ ಅಭ್ಯರ್ಥಿಗಳು ಶುಲ್ಕ ಪಾವತಿ, ನಂತರ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಲು ಆಗಸ್ಟ್ 2ರಿಂದ ಆಗಸ್ಟ್ 8ರವರೆಗೆ ಅವಕಾಶ ನೀಡಲಾಗಿದೆ. ಕಾಲೇಜಿಗೆ ವರದಿ ಮಾಡಿಕೊಳ್ಳಲು ಆಗಸ್ಟ್ 9ರಂದು ಕೊನೆ ದಿನ ಎಂದು ಅವರು ವಿವರಿಸಿದ್ದಾರೆ.ʼ
ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸ್‌ಗಳ ಪ್ರವೇಶಕ್ಕೆ ಛಾಯ್ಸ್ ಗಳನ್ನು ಆಯ್ಕೆ ಮಾಡಲು ಆಗಸ್ಟ್ 4ರಿಂದ ಅವಕಾಶ ನೀಡಲಾಗಿದೆ. ಛಾಯ್ಸ್-1 ಆಯ್ಕೆ ಮಾಡಿದವರು ಆಗಸ್ಟ್ 4ರಿಂದ 8ರವರೆಗೆ ಶುಲ್ಕ ಪಾವತಿಸಿ, ಆಗಸ್ಟ್ 9ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು.
ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್, ಆರ್ಕಿಟೆಕ್ಚರ್ ಕೋರ್ಸ್ ಅಭ್ಯರ್ಥಿಗಳು ಆಗಸ್ಟ್ 5ರಿಂದ ಛಾಯ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಛಾಯ್ಸ್-1 ಆಯ್ಕೆ ಮಾಡಿದವರು ಆಗಸ್ಟ್ 11ರೊಳಗೆ ಶುಲ್ಕ ಪಾವತಿಸಬೇಕು. ಆಗಸ್ಟ್ 12ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.
ಬಿಎಸ್‌ಸಿ ನರ್ಸಿಂಗ್ ಕೋರ್ಸ್‌ಗೆ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಆಗಸ್ಟ್ 6ರಿಂದ ಛಾಯ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಛಾಯ್ಸ್- 1 ಆಯ್ಕೆ ಮಾಡಿದವರು, ಆ.11ರೊಳಗೆ ಶುಲ್ಕ ಪಾವತಿಸಿ, ಆ.12ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಹೋಮಿಯೋಪಥಿ ಕೋರ್ಸ್ ಗಳಿಗೆ ಸೀಟು ಹಂಚಿಕೆಯಾಗಿರುವವರು ಆಗಸ್ಟ್ 7ರಿಂದ ಛಾಯ್ಸ್ ಗಳನ್ನು ಆಯ್ಕೆ ಮಾಡಬಹುದು. ಅವರು ಆಗಸ್ಟ್ 11ರೊಳಗೆ ಶುಲ್ಕ ಪಾವತಿಸಿ, ಆಗಸ್ಟ್ 12ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು. ಎಂಸಿಸಿ ಸೀಟು ಹಂಚಿಕೆ ಫಲಿತಾಂಶವನ್ನು ಆ.6ರಂದು ಪ್ರಕಟಿಸಲಿದ್ದು, ಅದರ ನಂತರವೇ ರಾಜ್ಯದಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅವರು ವಿವರಿಸಿದ್ದಾರೆ.
ಕೌನ್ಸೆಲಿಂಗ್ ನಡೆಸಲು ವೇಳಾಪಟ್ಟಿಯಲ್ಲಿನ ಲಭ್ಯವಿರುವ ಸೀಮಿತ ಸಮಯವನ್ನು ಗಮನದಲ್ಲಿ ಇಟ್ಟುಕೊಂಡು, ಎಲ್ಲ ಕಾಲೇಜುಗಳು ಎಲ್ಲ ಶನಿವಾರ ಮತ್ತು ಭಾನುವಾರಗಳು ಹಾಗೂ ಸಾರ್ವತ್ರಿಕ ರಜಾ ದಿನಗಳನ್ನು ಕೂಡ ಕೆಲಸದ ದಿನಗಳೆಂದು ಪರಿಗಣಿಸಲು ಪ್ರಸನ್ನ ಅವರು ಸೂಚಿಸಿದ್ದಾರೆ.
BIG NEWS: ಸಾಗರ ತಾಯಿ ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’ ಕೇಸ್: ಆರೋಗ್ಯ ಇಲಾಖೆ ‘ಕಚೇರಿ ಅಧೀಕ್ಷಕ’ನೇ ಸಾಥ್