ನವದೆಹಲಿ: ಗುಜರಾತ್ನ ಮೆಹ್ಸಾನಾ ಜಿಲ್ಲೆಯ ರಸಗೊಬ್ಬರ ಕಾರ್ಖಾನೆಯಲ್ಲಿ ಭಾನುವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಬ್ಬರು ಕಾರ್ಮಿಕರು ಸುಟ್ಟು ಕರಕಲಾಗಿದ್ದು, ಇನ್ನೂ ಅನೇಕರು ಸುಟ್ಟ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಜಾನೆ 3 ಗಂಟೆ ಸುಮಾರಿಗೆ ಸಮೇತ್ರ ಗ್ರಾಮದ ಬಳಿ ಇರುವ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮೆಹ್ಸಾನಾ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾತ್ರಿ ಪಾಳಿಯಲ್ಲಿ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಸುಟ್ಟು ಸಾವನ್ನಪ್ಪಿದ್ದಾರೆ.
ಇನ್ನಿಬ್ಬರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಅವರು ಹೇಳಿದರು.
ಬೆಂಕಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿಯ ತಂಡ ಸ್ಥಳಕ್ಕೆ ಧಾವಿಸಿದರು.
ಬೆಂಕಿಯನ್ನು ನಿಯಂತ್ರಿಸಲು ಅವರಿಗೆ ಸುಮಾರು ಒಂದು ಗಂಟೆ ಬೇಕಾಯಿತು ಎಂದು ಮೆಹ್ಸಾನಾ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ ಇಬ್ಬರು ಕಾರ್ಮಿಕರ ಸುಟ್ಟ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ನಡೆದಾಗ ಸ್ಥಾವರದಲ್ಲಿ ಆರು ಕಾರ್ಮಿಕರು ಇದ್ದರು ಎಂದು ಅವರು ಹೇಳಿದರು.
ಮೃತರನ್ನು ಬಿಹಾರ ಮತ್ತು ಮಹಾರಾಷ್ಟ್ರ ಮೂಲದ ಮನೀಶ್ ಮತ್ತು ಫುಲ್ಚಂದ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳಾಂತರಿಸಲಾಗಿದೆ ಮತ್ತು ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು