ಲಂಡನ್: ನೈಋತ್ಯ ಇಂಗ್ಲೆಂಡ್ನ ಸ್ಟೋನ್ಹೆಂಜ್ನಲ್ಲಿ ಪರಿಸರ ಪ್ರತಿಭಟನಾಕಾರರು ಕಿತ್ತಳೆ ಬಣ್ಣದ ವಸ್ತುವನ್ನು ಸಿಂಪಡಿಸಿದ್ದಕ್ಕೆ ರಿಟಿಶ್ ಪೊಲೀಸರು ಬುಧವಾರ (ಜೂನ್ 19) ಭಾರತೀಯ ಮೂಲದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಈ ಘಟನೆಯ ನಂತರ, ಜಸ್ಟ್ ಸ್ಟಾಪ್ ಆಯಿಲ್ ಪ್ರತಿಭಟನಾ ಗುಂಪು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಯುನೈಟೆಡ್ ಕಿಂಗ್ಡಮ್ನ ಭವಿಷ್ಯದ ಸರ್ಕಾರವು 2030 ರ ವೇಳೆಗೆ ಪಳೆಯುಳಿಕೆ ಇಂಧನಗಳನ್ನು ಹಂತ ಹಂತವಾಗಿ ತೆಗೆದುಹಾಕಲು ಕಾನೂನುಬದ್ಧವಾಗಿ ಪ್ರತಿಜ್ಞೆ ಮಾಡಬೇಕೆಂದು ಒತ್ತಾಯಿಸಲು ತನ್ನ ಇಬ್ಬರು ಕಾರ್ಯಕರ್ತರು “ಸ್ಟೋನ್ಹೆಂಜ್ ಅನ್ನು ಕಿತ್ತಳೆ ಪುಡಿ ಬಣ್ಣದಿಂದ ಸಿಂಪಡಿಸಿದ್ದಾರೆ” ಎಂದು ಹೇಳಿದೆ.
ಬಂಧಿತ ಭಾರತೀಯ ಮೂಲದ ವ್ಯಕ್ತಿಯನ್ನು 73 ವರ್ಷದ ರಾಜನ್ ನಾಯ್ಡು ಎಂದು ಗುರುತಿಸಲಾಗಿದ್ದು, ಪರಿಸರ ಕಾರ್ಯಕರ್ತ ಮತ್ತು ಜಸ್ಟ್ ಸ್ಟಾಪ್ ಆಯಿಲ್ ಗ್ರೂಪ್ನ ಸದಸ್ಯನಾಗಿದ್ದಾನೆ.
ಈ ಘಟನೆಯ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಪ್ರತಿಭಟನಾಕಾರರು “ಜಸ್ಟ್ ಸ್ಟಾಪ್ ಆಯಿಲ್” ಬ್ರಾಂಡ್ ಟೀ ಶರ್ಟ್ಗಳನ್ನು ಧರಿಸಿ ಪ್ರಸಿದ್ಧ ಇತಿಹಾಸಪೂರ್ವ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಮೇಲೆ ಕಿತ್ತಳೆ ಬಣ್ಣವನ್ನು ಸಿಂಪಡಿಸಿದ್ದಾರೆ.
ಐತಿಹಾಸಿಕ ಸ್ಮಾರಕಗಳ ಮೇಲೆ ಸಿಂಪಡಿಸಲು ಅವರು “ಕಿತ್ತಳೆ ಕಾರ್ನ್ ಫ್ಲೋರ್” ಅನ್ನು ಬಳಸಿದ್ದಾರೆ ಮತ್ತು ಅದು ಮಳೆಯಿಂದ ಕೊಚ್ಚಿಹೋಗುತ್ತದೆ ಎಂದು ಗುಂಪು ಹೇಳಿದೆ.
“ಇಂದು ಮಧ್ಯಾಹ್ನ ಸ್ಟೋನ್ಹೆಂಜ್ನಲ್ಲಿ ನಡೆದ ಘಟನೆಯ ನಂತರ ಇಬ್ಬರನ್ನು ಬಂಧಿಸಲಾಗಿದೆ” ಎಂದು ವಿಲ್ಟ್ಶೈರ್ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
“ಅಧಿಕಾರಿಗಳು ಘಟನಾ ಸ್ಥಳಕ್ಕೆ ಹಾಜರಾಗಿ ಪ್ರಾಚೀನ ಸ್ಮಾರಕಕ್ಕೆ ಹಾನಿ ಮಾಡಿದ ಅನುಮಾನದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ” ಎಂದು ಅವರು ಹೇಳಿದರು.