ಬೆಂಗಳೂರು: ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ನಡುವಿನ 18 ಕಿ.ಮೀ ಸುರಂಗ ರಸ್ತೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 9.45 ಕೋಟಿ ರೂ ವ್ಯಯ ಮಾಡಲಿದೆ
ಸರ್ಜಾಪುರ-ಹೆಬ್ಬಾಳ ಮಾರ್ಗ (37 ಕಿ.ಮೀ)ವನ್ನು ಒಳಗೊಂಡ ಇದೇ ರೀತಿಯ ವರದಿಯನ್ನು ನಮ್ಮ ಮೆಟ್ರೋ ಕೇವಲ 1.58 ಕೋಟಿ ರೂ.ಗೆ ಸಿದ್ಧಪಡಿಸಿದೆ.
ಸುರಂಗ ರಸ್ತೆ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಬಿಬಿಎಂಪಿ ಕಳೆದ ತಿಂಗಳು ರೋಡಿಕ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ನೇಮಿಸಿಕೊಂಡಿತ್ತು. ಟೆಂಡರ್ ನಲ್ಲಿ ಕೇವಲ ಇಬ್ಬರು ಬಿಡ್ ದಾರರು ಭಾಗವಹಿಸಿದ್ದರು. ಇದೇ ಯೋಜನೆಯ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲು ಬಿಬಿಎಂಪಿ ಈಗಾಗಲೇ ಅಲ್ಟಿನೋಕ್ ಕನ್ಸಲ್ಟಿಂಗ್ ಎಂಜಿನಿಯರಿಂಗ್ ಐಎನ್ ಸಿಯನ್ನು ತೊಡಗಿಸಿಕೊಂಡಿದ್ದರಿಂದ, ಅದು ಎರಡನೇ ಬಿಡ್ ಅನ್ನು ತಿರಸ್ಕರಿಸಿತು. ರೊಡಿಕ್ ಕನ್ಸಲ್ಟೆಂಟ್ಸ್ ಲಿಮಿಟೆಡ್ ಏಕೈಕ ಬಿಡ್ಡರ್ ಆಗಿ ಹೊರಹೊಮ್ಮಿತು.
ಸುರಂಗ ರಸ್ತೆಯ ಒಟ್ಟು ಅಂದಾಜು ಯೋಜನಾ ವೆಚ್ಚದ 0.1% ರಷ್ಟು ಡಿಪಿಆರ್ ವೆಚ್ಚವನ್ನು ಮೂಲತಃ 15 ಕೋಟಿ ರೂ.ಗಳೆಂದು ಅಂದಾಜಿಸಿದ್ದರಿಂದ ಬಿಬಿಎಂಪಿ ಈ ನಿರ್ಧಾರಕ್ಕೆ ಮುಂದಾಗಿತ್ತು.
ಈ ವರ್ಷದ ಆರಂಭದಲ್ಲಿ, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸಲು ಮೂಲಸೌಕರ್ಯ ಯೋಜನೆಯನ್ನು ಸಿದ್ಧಪಡಿಸಲು ಬಿಬಿಎಂಪಿ 4.7 ಕೋಟಿ ರೂ.ಗಳನ್ನು ಹೂಡಿಕೆ ಮಾಡಿತು. ಖಾಸಗಿ ಕಂಪನಿ ಅಲ್ಟಿನೋಕ್ ಕನ್ಸಲ್ಟಿಂಗ್ ಎಂಜಿನಿಯರಿಂಗ್ ಲಿಮಿಟೆಡ್ ನಗರದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸಲು ಸುರಂಗ ರಸ್ತೆಗಳನ್ನು ನಿರ್ಮಿಸಲು ಸೂಚಿಸಿದೆ.







