ಬೆಂಗಳೂರು:ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಗಾಜನೂರಿನ ತುಂಗಾ ಅಣೆಕಟ್ಟು ನೈಋತ್ಯ ಮುಂಗಾರು ಆರಂಭಕ್ಕೂ ಮುನ್ನವೇ ಭರ್ತಿಯಾಗಿದೆ.
ತುಂಗಾ ಅಣೆಕಟ್ಟಿನ ಗರಿಷ್ಠ ಮಟ್ಟ ೫೮೮.೨೪ ಮೀಟರ್ ತಲುಪಿದೆ. ಜಲಾಶಯದಲ್ಲಿ 3.24 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿದೆ. ಭಾನುವಾರ ಐದು ಕ್ರೆಸ್ಟ್ ಗೇಟ್ ಗಳನ್ನು ತೆರೆದು 2,500 ಕ್ಯೂಸೆಕ್ ನೀರನ್ನು ಕೆಳಕ್ಕೆ ಬಿಡಲಾಗಿದೆ.
ಮುಂದಿನ ಕೆಲವು ದಿನಗಳವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯೊಂದಿಗೆ, ಮುಂದಿನ ದಿನಗಳಲ್ಲಿ ಹೆಚ್ಚಿನ ನೀರನ್ನು ಬಿಡುಗಡೆ ಮಾಡಲಾಗುವುದು. ನದಿ ದಡದಲ್ಲಿ ವಾಸಿಸುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ತುಂಗಾ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ತಿಪ್ಪಾನಾಯ್ಕ್ ತಿಳಿಸಿದರು.
ಶರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಲಿಂಗನಮಕ್ಕಿ ಜಲಾಶಯಕ್ಕೆ ಭಾನುವಾರ 10,900 ಕ್ಯೂಸೆಕ್ ನೀರು ಹರಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ ಅಣೆಕಟ್ಟಿನ ನೀರಿನ ಮಟ್ಟ 0.35 ಟಿಎಂಸಿ ಅಡಿ ಹೆಚ್ಚಾಗಿದೆ.
ಜಲಾಶಯದ ಗರಿಷ್ಠ ಮಟ್ಟ 1,819 ಅಡಿ ಇದ್ದು, ಪ್ರಸ್ತುತ 1,764 ಅಡಿ ನೀರು ಸಂಗ್ರಹವಾಗಿದೆ. ಕಳೆದ 24 ಗಂಟೆಗಳಲ್ಲಿ ಆಗುಂಬೆಯಲ್ಲಿ 202 ಮಿ.ಮೀ, ಹುಲಿಕಲ್ ನಲ್ಲಿ 179 ಮಿ.ಮೀ ಮಳೆಯಾಗಿದೆ. ಹವಾಮಾನ ಇಲಾಖೆ ಶಿವಮೊಗ್ಗ ಜಿಲ್ಲೆಯಲ್ಲಿ ಮೇ 26 ಮತ್ತು 27 ರಂದು ರೆಡ್ ಅಲರ್ಟ್ ಮತ್ತು ಮೇ 28 ಮತ್ತು 29 ರಂದು ಆರೆಂಜ್ ಅಲರ್ಟ್ ಘೋಷಿಸಿದೆ.