ಬೀಜಿಂಗ್:ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಚೀನಾಕ್ಕೆ ಭೇಟಿ ನೀಡಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ತೈವಾನ್ ವಿಚಾರವು ಉಭಯ ದೇಶಗಳ ಸಂಬಂಧದಲ್ಲಿ ಅತ್ಯಂತ ಸೂಕ್ಷ್ಮವಾದುದಾಗಿದ್ದು, ಈ ವಿಷಯವನ್ನು ಸರಿಯಾಗಿ ನಿಭಾಯಿಸದಿದ್ದರೆ ಎರಡು ಮಹಾಶಕ್ತಿಗಳ ನಡುವೆ ನೇರ ಸಂಘರ್ಷ ಏರ್ಪಡಬಹುದು ಎಂದು ಜಿನ್‌ಪಿಂಗ್ ಎಚ್ಚರಿಸಿದ್ದಾರೆ.
“ತೈವಾನ್ ಪ್ರಶ್ನೆಯು ಚೀನಾ-ಅಮೆರಿಕ ಸಂಬಂಧದ ಅತ್ಯಂತ ಪ್ರಮುಖ ಮತ್ತು ಸೂಕ್ಷ್ಮ ವಿಷಯವಾಗಿದೆ. ಒಂದು ವೇಳೆ ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ, ಎರಡು ದೇಶಗಳ ನಡುವೆ ಘರ್ಷಣೆ ಅಥವಾ ಸಂಘರ್ಷ ಸಂಭವಿಸಬಹುದು. ಇದು ಇಡೀ ಸಂಬಂಧವನ್ನು ಅಪಾಯಕ್ಕೆ ತಳ್ಳುತ್ತದೆ” ಎಂದು ಜಿನ್‌ಪಿಂಗ್ ಸಭೆಯಲ್ಲಿ ತಿಳಿಸಿದ್ದಾರೆ.
ಬೆಂಕಿ ಮತ್ತು ನೀರು: ತೈವಾನ್ ಸ್ವಾತಂತ್ರ್ಯ ಮತ್ತು ಜಲಸಂಧಿಯ ಶಾಂತಿ ಎಂಬುದು “ಬೆಂಕಿ ಮತ್ತು ನೀರು” ಇದ್ದಂತೆ, ಇವೆರಡೂ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಚೀನಾ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಜಿನ್‌ಪಿಂಗ್ ಅವರು ತೈವಾನ್ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದರೂ, ಟ್ರಂಪ್ ಮಾತ್ರ ಸಭೆಯಲ್ಲಿ ಅತ್ಯಂತ ಸೌಹಾರ್ದಯುತವಾಗಿ ವರ್ತಿಸಿದರು. ಶಿ ಜಿನ್‌ಪಿಂಗ್ ಅವರನ್ನು “ಉತ್ತಮ ನಾಯಕ” ಮತ್ತು “ಮಿತ್ರ” ಎಂದು ಬಣ್ಣಿಸಿದ ಟ್ರಂಪ್, ಅಮೆರಿಕ ಮತ್ತು ಚೀನಾ ಸಂಬಂಧವು ಹಿಂದೆಂದಿಗಿಂತಲೂ ಉತ್ತಮವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಘರ್ಷದ ಎಚ್ಚರಿಕೆಯ ನಡುವೆಯೇ, ಚೀನಾ ಅಮೆರಿಕದ ಬೋಯಿಂಗ್ ಕಂಪನಿಯಿಂದ ಸುಮಾರು 200 ವಿಮಾನಗಳನ್ನು ಖರೀದಿಸಲು ಒಪ್ಪಿಕೊಂಡಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಇದು ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಕ್ಕೆ ದೊಡ್ಡ ಬೂಸ್ಟ್ ನೀಡಲಿದೆ.
ಇರಾನ್ ಯುದ್ಧ, ಕೃತಕ ಬುದ್ಧಿಮತ್ತೆ (AI), ಮತ್ತು ವ್ಯಾಪಾರ ತೆರಿಗೆಗಳ ಕುರಿತು ಎರಡೂ ದೇಶಗಳ ನಾಯಕರು ಸುದೀರ್ಘವಾಗಿ ಚರ್ಚಿಸಿದರು.







