ವಾಷಿಂಗ್‌ಟನ್: ಇರಾನ್ ಮೇಲೆ ಒತ್ತಡ ಹೇರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಇರಾನ್ ಬಳಿ ಇರುವ ಸುಮಾರು 400 ಕೆಜಿ ಸಂವರ್ಧಿತ ಯುರೇನಿಯಂ (Enriched Uranium) ಅನ್ನು ವಶಪಡಿಸಿಕೊಳ್ಳಲು ಅಮೆರಿಕದ ವಿಶೇಷ ಪಡೆಗಳಿಂದ ‘ಗ್ರೌಂಡ್ ಆಪರೇಷನ್’ (ನೆಲದ ಮೇಲಿನ ಮಿಲಿಟರಿ ಕಾರ್ಯಾಚರಣೆ) ನಡೆಸಲು ಗಂಭೀರ ಚಿಂತನೆ ನಡೆಸಿದ್ದಾರೆ. ಆದರೆ, ಈ ನಿರ್ಧಾರವು ಅಮೆರಿಕಕ್ಕೆ ಅತಿ ದೊಡ್ಡ ಸವಾಲಾಗುವ ಸಾಧ್ಯತೆಯಿದೆ.
ಇರಾನ್ ಪರಮಾಣು ಬಾಂಬ್ ತಯಾರಿಸದಂತೆ ತಡೆಯಲು ಅದರ ಪರಮಾಣು ಕೇಂದ್ರಗಳಿಂದ ಯುರೇನಿಯಂ ಸಂಗ್ರಹವನ್ನು ಕಿತ್ತುಕೊಳ್ಳುವುದು ಟ್ರಂಪ್ ಅವರ ಉದ್ದೇಶವಾಗಿದೆ. ಶತ್ರು ದೇಶದೊಳಗೆ ನುಗ್ಗಿ ಇಷ್ಟು ದೊಡ್ಡ ಪ್ರಮಾಣದ ವಿಕಿರಣಶೀಲ ವಸ್ತುವನ್ನು ಹೊರತರುವುದು ಸಾಮಾನ್ಯ ಸವಾಲಲ್ಲ. ಇದು ಅಮೆರಿಕದ ಸೈನಿಕರ ಜೀವಕ್ಕೆ ಮಾತ್ರವಲ್ಲದೆ, ಇಡೀ ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧಕ್ಕೆ ನಾಂದಿ ಹಾಡುವ ಅಪಾಯ ಹೊಂದಿದೆ.
400 ಕೆಜಿ ಯುರೇನಿಯಂ ಅನ್ನು ಸುರಕ್ಷಿತವಾಗಿ ಸಾಗಿಸಲು ವಿಶೇಷ ಕಂಟೈನರ್‌ಗಳು ಮತ್ತು ಭಾರಿ ಭದ್ರತೆಯ ಅಗತ್ಯವಿದೆ. ಸ್ವಲ್ಪ ತಪ್ಪಾದರೂ ವಿಕಿರಣ ಸೋರಿಕೆಯಂತಹ ಭೀಕರ ಅನಾಹುತ ಸಂಭವಿಸಬಹುದು.ಇರಾನ್‌ನ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ದಾಟಿ ಈ ಕಾರ್ಯಾಚರಣೆ ಮಾಡುವುದು ಅತೀ ಹೆಚ್ಚು ಅಪಾಯಕಾರಿ.
ಯುದ್ಧ ಆರಂಭವಾದರೆ ಕಚ್ಚಾ ತೈಲ ಪೂರೈಕೆ ಸಂಪೂರ್ಣ ಸ್ಥಗಿತಗೊಂಡು, ಜಾಗತಿಕ ಆರ್ಥಿಕತೆ ಕುಸಿಯಬಹುದು. ವಿಶ್ವಸಂಸ್ಥೆ ಮತ್ತು ಇತರ ಮಿತ್ರ ರಾಷ್ಟ್ರಗಳ ಅನುಮತಿಯಿಲ್ಲದೆ ಇಂತಹ ಕಾರ್ಯಾಚರಣೆ ನಡೆಸಿದರೆ ಅಮೆರಿಕ ಜಾಗತಿಕವಾಗಿ ಏಕಾಂಗಿಯಾಗುವ ಸಾಧ್ಯತೆಯಿದೆ.








