ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಹೊತ್ತಿ ಉರಿಯುತ್ತಿರುವಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆ ಸಂಧಾನಕ್ಕೆ ಮುಂದಾಗಿದ್ದಾರೆ. “ಮಾತುಕತೆಗಳು ಯಶಸ್ವಿಯಾಗಿ ನಡೆಯುತ್ತಿವೆ” ಎಂದು ಟ್ರಂಪ್ ಹೇಳಿಕೊಳ್ಳುತ್ತಿದ್ದರೆ, ಇತ್ತ ಇರಾನ್ ಮಾತ್ರ ಅಮೆರಿಕದ ಶಾಂತಿ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆದಿದೆ. ಅಮೆರಿಕದ ಕರೆಯನ್ನು ಸ್ವೀಕರಿಸಲು ಇರಾನ್ ನಿರಾಕರಿಸುತ್ತಿರುವುದರ ಹಿಂದೆ 3 ಬಲವಾದ ಕಾರಣಗಳಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಮಾತುಕತೆಗಳು ನಡೆಯುತ್ತಿದ್ದಾಗಲೇ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ಬಾಂಬ್ ದಾಳಿ ನಡೆಸಿವೆ. “ಮಾತುಕತೆಯ ಹೆಸರಲ್ಲಿ ಅಮೆರಿಕ ಸಮಯ ಹರಣ ಮಾಡುತ್ತಿದೆ ಮತ್ತು ತನ್ನ ಸೈನ್ಯವನ್ನು ಸನ್ನದ್ಧಗೊಳಿಸುತ್ತಿದೆ” ಎಂಬುದು ಇರಾನ್‌ನ ಪ್ರಬಲ ಆರೋಪ. ಹೀಗಾಗಿ, ಟ್ರಂಪ್ ಮಾತುಗಳನ್ನು ಇರಾನ್ ನಂಬುತ್ತಿಲ್ಲ.
ಕಠಿಣ ಷರತ್ತುಗಳು (Maximalist Demands): ಟ್ರಂಪ್ ಮಂಡಿಸಿರುವ 15 ಅಂಶಗಳ ಶಾಂತಿ ಯೋಜನೆಯು ಇರಾನ್‌ಗೆ ಏಕಪಕ್ಷೀಯವಾಗಿ ಕಾಣುತ್ತಿದೆ. ಇರಾನ್‌ನ ಪರಮಾಣು ಚಟುವಟಿಕೆಗಳನ್ನು ಸಂಪೂರ್ಣ ನಿಲ್ಲಿಸುವುದು ಮತ್ತು ಹಾರ್ಮುಜ್ ಜಲಸಂಧಿಯ ಮೇಲಿನ ಹತೋಟಿಯನ್ನು ಬಿಟ್ಟುಕೊಡುವಂತೆ ಅಮೆರಿಕ ಒತ್ತಾಯಿಸುತ್ತಿದೆ. ಇದು ಇರಾನ್‌ನ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆ ಎಂಬುದು ಅವರ ವಾದ.
ಇರಾನ್ ಈಗ ‘ಅಪ್ಪರ್ ಹ್ಯಾಂಡ್’ ಪಡೆಯಲು ಪ್ರಯತ್ನಿಸುತ್ತಿದೆ. ಯುದ್ಧ ನಿಲ್ಲಬೇಕಾದರೆ ಅಮೆರಿಕವು ತನ್ನ ಅಧಿಕಾರಿಗಳ ಹತ್ಯೆಯನ್ನು ನಿಲ್ಲಿಸಬೇಕು, ಯುದ್ಧದ ನಷ್ಟ ಪರಿಹಾರ ನೀಡಬೇಕು ಮತ್ತು ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ಸಂಪೂರ್ಣ ಅಧಿಕಾರವನ್ನು ಒಪ್ಪಿಕೊಳ್ಳಬೇಕು ಎಂಬ 5 ಅಂಶಗಳ ಪರ್ಯಾಯ ಯೋಜನೆಯನ್ನು ಮುಂದಿಟ್ಟಿದೆ.








