ವಾಷಿಂಗ್ಟನ್:ಪಶ್ಚಿಮ ಏಷ್ಯಾ ಅಥವಾ ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ತಾರಕಕ್ಕೇರುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಂತರಾಷ್ಟ್ರೀಯ ಮಿಲಿಟರಿ ಮೈತ್ರಿಕೂಟವಾದ ನ್ಯಾಟೋ (North Atlantic Treaty Organization) ದಿಂದ ಅಮೆರಿಕವನ್ನು ಹೊರತರುವ ಕುರಿತು ಚಿಂತನೆ ನಡೆಸುತ್ತಿದ್ದಾರೆ. ಇದು ದಶಕಗಳ ಕಾಲದ ಜಾಗತಿಕ ಭದ್ರತಾ ಸಮೀಕರಣವನ್ನು ಬದಲಿಸುವ ಸಾಧ್ಯತೆಯಿದೆ.
ನ್ಯಾಟೋ ಸದಸ್ಯ ರಾಷ್ಟ್ರಗಳು ತಮ್ಮ ರಕ್ಷಣಾ ವೆಚ್ಚದಲ್ಲಿ ಸರಿಯಾದ ಪಾಲು ನೀಡುತ್ತಿಲ್ಲ ಮತ್ತು ಅಮೆರಿಕದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಟ್ರಂಪ್ ಈ ಹಿಂದಿನಿಂದಲೂ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಯುದ್ಧದ ಸಮಯದಲ್ಲಿ ಈ ನಿರ್ಧಾರ ಕೈಗೊಳ್ಳಲು ಮುಂದಾಗಿರುವುದು ಜಾಗತಿಕ ನಾಯಕರನ್ನು ಆತಂಕಕ್ಕೆ ತಳ್ಳಿದೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಲ್ಲಿ ಯುರೋಪಿಯನ್ ರಾಷ್ಟ್ರಗಳು ಅಮೆರಿಕದ ನಿಲುವಿಗೆ ಪೂರ್ಣ ಬೆಂಬಲ ನೀಡುತ್ತಿಲ್ಲ ಎಂಬುದು ಟ್ರಂಪ್ ಅವರ ಕೋಪಕ್ಕೆ ಕಾರಣ ಎನ್ನಲಾಗಿದೆ. “ಅಮೆರಿಕದ ಹಿತಾಸಕ್ತಿಯೇ ಮೊದಲು” (America First) ಎಂಬ ನೀತಿಯಡಿ ಅವರು ಈ ಹೆಜ್ಜೆ ಇಡಲು ಬಯಸಿದ್ದಾರೆ.ಒಂದು ವೇಳೆ ಅಮೆರಿಕವು ನ್ಯಾಟೋದಿಂದ ಹೊರಬಂದರೆ, ರಷ್ಯಾ ಮತ್ತು ಇತರ ಎದುರಾಳಿ ರಾಷ್ಟ್ರಗಳಿಗೆ ಅದು ವರದಾನವಾಗಲಿದೆ. ಯುರೋಪ್ನ ಭದ್ರತಾ ಕವಚವೇ ಕುಸಿದು ಬೀಳಬಹುದು ಎಂದು ರಾಜತಾಂತ್ರಿಕ ತಜ್ಞರು ಎಚ್ಚರಿಸಿದ್ದಾರೆ.
ಟ್ರಂಪ್ ಅವರ ಈ ನಿರ್ಧಾರಕ್ಕೆ ಅಮೆರಿಕದ ಸಂಸತ್ತಿನಲ್ಲಿ (Congress) ಮತ್ತು ಸ್ವಂತ ಪಕ್ಷದಲ್ಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ನ್ಯಾಟೋ ಅಮೆರಿಕದ ಶಕ್ತಿಯಾಗಿದೆ, ಅದನ್ನು ದುರ್ಬಲಗೊಳಿಸಬಾರದು ಎಂಬ ವಾದಗಳು ಕೇಳಿಬರುತ್ತಿವೆ.







