ನ್ಯೂಯಾರ್ಕ್: ಗಲ್ಫ್ ಆಫ್ ಮೆಕ್ಸಿಕೊ ಹೆಸರನ್ನು ಗಲ್ಫ್ ಆಫ್ ಅಮೇರಿಕಾ ಮತ್ತು ಅಲಾಸ್ಕನ್ ಶಿಖರ ಡೆನಾಲಿಯನ್ನು ಮೌಂಟ್ ಮೆಕಿನ್ಲೆ ಎಂದು ಅಧಿಕೃತವಾಗಿ ಬದಲಾಯಿಸಲಾಗಿದೆ ಎಂದು ಟ್ರಂಪ್ ಆಡಳಿತದ ಆಂತರಿಕ ಇಲಾಖೆ ಶುಕ್ರವಾರ ತಿಳಿಸಿದೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳ ನಂತರ ಕಾರ್ಯನಿರ್ವಾಹಕ ಕ್ರಮಗಳ ಭಾಗವಾಗಿ ಹೆಸರು ಬದಲಾವಣೆಗೆ ಆದೇಶಿಸಿದ್ದಾರೆ.
“ಅಧ್ಯಕ್ಷರ ನಿರ್ದೇಶನದಂತೆ, ಗಲ್ಫ್ ಆಫ್ ಮೆಕ್ಸಿಕೊವನ್ನು ಈಗ ಅಧಿಕೃತವಾಗಿ ಗಲ್ಫ್ ಆಫ್ ಅಮೇರಿಕಾ ಎಂದು ಕರೆಯಲಾಗುತ್ತದೆ ಮತ್ತು ಉತ್ತರ ಅಮೆರಿಕದ ಅತಿ ಎತ್ತರದ ಶಿಖರವು ಮತ್ತೊಮ್ಮೆ ಮೌಂಟ್ ಮೆಕಿನ್ಲೆ ಹೆಸರನ್ನು ಹೊಂದಿರುತ್ತದೆ” ಎಂದು ಆಂತರಿಕ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಅಲಾಸ್ಕಾದ ಅತ್ಯುನ್ನತ ಶಿಖರವನ್ನು ಈ ಹಿಂದೆ ಮಾಜಿ ಯುಎಸ್ ಅಧ್ಯಕ್ಷ ವಿಲಿಯಂ ಮೆಕಿನ್ಲೆ ಅವರ ಗೌರವಾರ್ಥವಾಗಿ ಮೌಂಟ್ ಮೆಕಿನ್ಲೆ ಎಂದು ಕರೆಯಲಾಗುತ್ತಿತ್ತು, ಆದರೆ 1975 ರಲ್ಲಿ ರಾಜ್ಯದ ಕೋರಿಕೆಯ ಮೇರೆಗೆ ಡೆನಾಲಿ ಎಂದು ಮರುನಾಮಕರಣ ಮಾಡಲಾಯಿತು .
“ಈ ಬದಲಾವಣೆಗಳು ಯುನೈಟೆಡ್ ಸ್ಟೇಟ್ಸ್ನ ಅಸಾಧಾರಣ ಪರಂಪರೆಯನ್ನು ಸಂರಕ್ಷಿಸುವ ಮತ್ತು ಭವಿಷ್ಯದ ಪೀಳಿಗೆಯ ಅಮೆರಿಕನ್ನರು ಅದರ ವೀರರು ಮತ್ತು ಐತಿಹಾಸಿಕ ಸ್ವತ್ತುಗಳ ಪರಂಪರೆಯನ್ನು ಆಚರಿಸುವುದನ್ನು ಖಚಿತಪಡಿಸಿಕೊಳ್ಳುವ ರಾಷ್ಟ್ರದ ಬದ್ಧತೆಯನ್ನು ಪುನರುಚ್ಚರಿಸುತ್ತವೆ” ಎಂದು ಇಲಾಖೆ ಹೇಳಿದೆ.
1897 ರಿಂದ 1901 ರವರೆಗೆ ಅಧ್ಯಕ್ಷರಾಗಿದ್ದ ರಿಪಬ್ಲಿಕನ್ ಪಕ್ಷದ ಮೆಕಿನ್ಲೆ ನಮ್ಮ ದೇಶವನ್ನು ಬಹಳ ಶ್ರೀಮಂತಗೊಳಿಸಿದ್ದಾರೆ ಎಂದು ಟ್ರಂಪ್ ಸೋಮವಾರ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು