ಬೆಂಗಳೂರು: ಕರ್ನಾಟಕ ಹೈಕೋರ್ಟ್ ಸೂಚನೆಯ ಮೇರೆಗೆ ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಿಕೆ ಮಾಡುತ್ತಿರುವುದಾಗಿ ಸಾರಿಗೆ ಸಂಘಟನೆಗಳ ಜಂಟಿ ಕ್ರಿಯಾಸಮಿತಿಯ ಅಧ್ಯಕ್ಷ ಅನಂತ ಸುಬ್ಬಾರಾವ್ ಘೋಷಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯಾಧ್ಯಂತ ಈ ಕ್ಷಣದಿಂದಲೇ ಹೈಕೋರ್ಟ್ ಸೂಚನೆಯ ಮೇರೆಗೆ ನಾವು ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಿಕೆ ಮಾಡುವುದಾಗಿ ಘೋಷಿಸಿದರು.
ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಗರಂ
ಬೆಂಗಳೂರು: ಜನರಿಗೆ ನಿಮ್ಮ ಮುಷ್ಕರದಿಂದ ಸಮಸ್ಯೆ ಆಗಬಾರದು. ಮುಷ್ಕರ ನಿಂತಿರುವ ಬಗ್ಗೆ ನಾಳೆ ಮಾಹಿತಿ ನೀಡಬೇಕು. ಇಲ್ಲವಾದರೆ ನಾಳೆ ನ್ಯಾಯಾಂಗ ನಿಂದನೆ ಕೇಸ್ ದಾಖಲು ಮಾಡುವುದಾಗಿ ಹೈಕೋರ್ಟ್ ಸಿಜೆ ವಿಭು ಬಕ್ರು, ನ್ಯಾಯಮೂರ್ತಿ ಸಿ ಎಂ ಜೋಶಿ ಅವರಿದ್ದ ನ್ಯಾಯಪೀಠವು ಎಚ್ಚರಿಕೆ ನೀಡಿದೆ.
ಇಂದು ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದಂತ ಪಿಐಎಲ್ ಅರ್ಜಿಯನ್ನು ವಿಚಾರಣೆ ನಡೆಸಲಾಯಿತು. ವಾದ ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಘಕ್ಕೆ ನೋಟಿಸ್ ನೀಡಿದೆ.
ಇದೇ ಸಂದರ್ಭದಲ್ಲಿ ಮುಷ್ಕರ ಮುಂದುವರೆಸಿದರೇ ಎಸ್ಮಾ ಅಡಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂಬುದಾಗಿಯೂ ಹೈಕೋರ್ಟ್ ತಿಳಿಸಿದೆ. ಹೈಕೋರ್ಟ್ ತರಾಟೆಗೆ ಸಾರಿಗೆ ನೌಕರರ ಸಂಘಟನೆಯ ಜಂಟಿ ಕ್ರಿಯಾ ಸಮಿತಿ ಪರ ವಕೀಲರು ತಬ್ಬಿಬ್ಬಾದರು. ನಾಳೆ ಸಾರಿಗೆ ಮುಷ್ಕರ ನಡೆಸುವುದಿಲ್ಲವೆಂದು ನೌಕರರ ಸಂಘಟನೆ ಪರ ವಕೀಲರು ಹೈಕೋರ್ಟ್ ಗೆ ತಿಳಿಸಿದರು.
ಜನರಿಗೆ ನಿಮ್ಮ ಮುಷ್ಕರದಿಂದ ಸಮಸ್ಯೆ ಆಗಬಾರದು. ಎಸ್ಮಾ ಜಾರಿಯಾದರೂ ಮುಷ್ಕರ ನಡೆಸುವುದು ಕಾನೂನು ಬಾಹಿರವಾಗಿದೆ ಎಂಬುದಾಗಿ ಹೇಳುವ ಮೂಲಕ ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಘಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ಅಲ್ಲದೇ ಮತ್ತೆ ಎರಡು ದಿನ ಸಾರಿಗೆ ನೌಕರರ ಮುಷ್ಕರಕ್ಕೆ ತಡೆಯಾಜ್ಞೆ ವಿಸ್ತರಿಸಿ, ಆಗಸ್ಟ್.7ಕ್ಕೆ ವಿಚಾರಣೆ ಮುಂದೂಡಿದೆ.