ಬೆಂಗಳೂರು: ಕೆ ಎಸ್ ಆರ್ ಟಿ ಸಿ ಚಾಲಕ ರಾಜೀವ್ ಬೀರಸಾಲ ಸಾವಿನಲ್ಲೂ ಮಾನವೀಯತೆ ಮೆರೆದು ಪ್ರಯಾಣಿಕರ ಜೀವ ಉಳಿಸಿದ್ದಾರೆ. ಇಂತಹ ಚಾಲಕನ ಸಾವಿಗೆ ಕಂಬನಿ ಮಿಡಿದಿರುವಂತ ರಾಮಲಿಂಗಾರೆಡ್ಡಿ, ಅವಲಂಬಿತರಿಗೆ ನೌಕರಿ, ಆರ್ಥಿಕ ನೆರವಿಗೆ ಸೂಚಿಸಿದ್ದಾರೆ.
ಈ ಕುರಿತಂತೆ ಕೆ ಎಸ್ ಆರ್ ಟಿಸಿ ಮಾಹಿತಿ ನೀಡಿದ್ದು, ರಾಜೀವ್ ಬೀರಸಾಲ, ಚಾಲಕ- ಕಂ-ನಿರ್ವಾಹಕ ಬಿಲ್ಲೆ. ಸಂಖ್ಯೆ. 2469,ವಯಸ್ಸು-56 ವರ್ಷ, ಸೇವೆಗೆ ಸೇರಿದ ದಿನಾಂಕ: 23.02.2005, ಇವರು ಹರಿಹರ ಘಟಕದ ಅನುಸೂಚಿ ಸಂಖ್ಯೆ 47 BA (ರಾಜಹಂಸ )ಬೆಂಗಳೂರು – ದಾವಣಗೆರೆ ಮಾರ್ಗದಲ್ಲಿ ಕಾರ್ಯಚರಣೆಯಲ್ಲಿದ್ದಾಗ ನೆಲಮಂಗಲ ಟೋಲ್ ಹತ್ತಿರ ವಾಹನ ಚಾಲನೆ ಮಾಡುತ್ತಿದ್ದಾಗ ಹೃದಯಾಘಾತವಾಗಿರುತ್ತದೆ. ಆದರೂ ಬಸ್ಸಿನಲ್ಲಿರುವ ಪ್ರಯಾಣಿಕರನ್ನು ರಕ್ಷಿಸಿ, ಬಸ್ಸನ್ನು ಹೆದ್ದಾರಿಯ ಒಂದು ಬದಿಯಲ್ಲಿ ಪಕ್ಕಕ್ಕೆ ನಿಲ್ಲಿಸಿ, ಭಾರಿ ಅನಾಹುತ ತಪ್ಪಿಸಿದ್ದಾರೆ. ಈ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದು ಪ್ರಯಾಣಿಕರ ಜೀವ ಉಳಿಸಿ ನೆಲಮಂಗಲ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾರೆ ಎಂದಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮೃತ ಚಾಲಕರ ಆತ್ಮಕ್ಕೆ ಶಾಂತಿ ಕೋರುತ್ತಾ, ಮೃತ ಕುಟುಂಬದವರಿಗೆ ಸಾಂತ್ವನ ತಿಳಿಸಿದ್ದಾರೆ. ಅಲ್ಲದೇ ಅತೀ ಶೀಘ್ರದಲ್ಲಿಯೇ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನೀಡುವುದು ಹಾಗೂ ಇವರ ಅವಲಂಬಿತರಿಗೆ ನೌಕರಿಯನ್ನು ಕೂಡಲೇ ನೀಡುವಂತೆ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದ್ದಾರೆ.