ಶಿವಮೊಗ್ಗ : ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯನ್ನು ವರ್ಗಾಯಿಸುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯಿಂದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಗುರುಕೃಷ್ಣ ಶೆಣೈಗೆ ಮನವಿ ಮಾಡಲಾಯಿತು.
ಈ ಮನವಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ ತಾಲ್ಲೂಕು ಅಧ್ಯಕ್ಷ ವಸೀಮ್ ಉಳ್ಳೂರು, ಗ್ರಾಮಾಡಳಿತ ದೇಶದ ಅಭಿವೃದ್ದಿಗೆ ಸಂಕೇತವಾಗಿರುತ್ತದೆ. ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಉತ್ತಮವಾಗಿ ಕೆಲಸ ಮಾಡಿದರೆ ಗ್ರಾಮಗಳು ಅಭಿವೃದ್ದಿಯಾಗತ್ತದೆ. ಆದರೆ ಉಳ್ಳೂರು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಕರ್ತವ್ಯಲೋಪದಿಂದಾಗಿ ಪಂಚಾಯ್ತಿ ಆಡಳಿತ ವ್ಯವಸ್ಥೆಯೆ ತಲೆಕೆಳಗಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪಂಚಾಯ್ತಿಯಲ್ಲಿ ಕಸವಿಲೇವಾರಿ ವಾಹನ ಇದ್ದರೂ ಅದರ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಮಳೆಯಲ್ಲಿ ವಾಹನ ನಿಲ್ಲಿಸುತ್ತಿರುವುದರಿಂದ ವಾಹನ ತುಕ್ಕು ಹಿಡಿಯುತ್ತಿದೆ. ಊರಿನ ಸ್ವಚ್ಚತೆಗೆ ಆದ್ಯತೆ ನೀಡುತ್ತಿಲ್ಲ. ಆಸ್ಪತ್ರೆ ರಸ್ತೆಯಲ್ಲಿ ಹೊಂಡಗುAಡಿಗಳು ಹೆಚ್ಚಿದ್ದು ಓಡಾಟಕ್ಕೆ ತೀವೃ ಅಡಚಣೆ ಉಂಟಾಗುತ್ತಿದೆ. ಈ-ಸ್ವತ್ತು ಸರಿಯಾದ ಸಮಯಕ್ಕೆ ಮಾಡಿಕೊಡದೆ ಗ್ರಾಮಸ್ಥರು ಪಂಚಾಯ್ತಿಗೆ ಹತ್ತಾರು ಬಾರಿ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಚರಂಡಿಯನ್ನು ಸ್ವಚ್ಚಗೊಳಿಸದೆ ಇರುವುದರಿಂದ ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಹರಿಯದೆ ರಸ್ತೆಯ ಮೇಲೆ ಹರಿದು ರಸ್ತೆ ಹಾಳಾಗುತ್ತಿದೆ. ಗ್ರಾಮ ಸಭೆಗಳಲ್ಲಿ ಅನುಷ್ಟಾನಗೊಂಡ ನಿರ್ಣಯ ಕಾರ್ಯರೂಪಕ್ಕೆ ಬರುತ್ತಿಲ್ಲ. ಗ್ರಾಮಸಭೆಗಳನ್ನು ಸರಿಯಾದ ಸಮಯಕ್ಕೆ ನಡೆಸುತ್ತಿಲ್ಲ. ಪಂಚಾಯ್ತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರುತ್ತಿಲ್ಲ. ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸದ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯನ್ನು ತಕ್ಷಣ ಬೇರೆ ಕಡೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಹಿಳಾ ಅಧ್ಯಕ್ಷೆ ಪಾರ್ವತಮ್ಮ, ರಾಘವೇಂದ್ರ, ಆಸೀಫ್, ರಾಘವೇಂದ್ರ, ಪ್ರಶಾಂತ್, ಬಸವರಾಜ್, ಮೋಹನ್ ಇನ್ನಿತರರು ಹಾಜರಿದ್ದರು.