ಬೆಂಗಳೂರು : ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ನೇಮಕವಾದ ಶಿಕ್ಷಕರಿಗೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಕಲಬುರ್ಗಿ ಅರ್ಜಿ ಸಂಖ್ಯೆ: 20511/2024 ರ ಮಧ್ಯಂತರ ಆದೇಶದಂತೆ ವರ್ಗಾವಣೆಗೆ ಪರಿಗಣಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿಷಯದನ್ವಯ, 2023-24ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣಾ ಪ್ರಕ್ರಿಯೆಗೆ ಉಲ್ಲೆಖಿ-3 ರಲ್ಲಿ ವಿಸ್ತ್ರತವಾದ ಮಾರ್ಗಸೂಚಿ ಸಹಿತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ ಸದರಿ ವೇಳಾಪಟ್ಟಿಯ ಪುಟ ಸಂಖ್ಯೆ 6 ರ ಪ್ಯಾರಾ 2 ರಲ್ಲಿ
“ಕಲ್ಯಾಣ ಕರ್ನಾಟಕ ಪ್ರದೇಶದ ಯಾವುದೇ ಏಳು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಕಲ್ಯಾಣ ಕರ್ನಾಟಕ ಪ್ರದೇಶದ ಹೊರಗೆ ವರ್ಗಾವಣೆಯನ್ನು ಕೋರುವುದಕ್ಕಾಗಿ ಎಲ್ಲಾ ಇತರ ಅರ್ಹತಾ ಷರತ್ತುಗಳ ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆ ವೃಂದದಲ್ಲಿ ಕನಿಷ್ಟ ಹತ್ತು ವರ್ಷಗಳ ನಿರಂತರ ಸೇವೆಯನ್ನು ಪೂರೈಸಿರಬೇಕು” ಎಂದು ನಮೂದಿಸಲಾಗಿತ್ತು.
ಸದರಿ ಅಧಿಸೂಚನೆಯಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಶಿಕ್ಷಕರ ವರ್ಗಾವಣೆ ಅಂಶದ ಕುರಿತಂತೆ ಕೆಲವು ಶಿಕ್ಷಕರು ನ್ಯಾಯಾಲಯದಲ್ಲಿ ದಾವೆ ಹೂಡಿರುತ್ತಾರೆ. ಕರ್ನಾಟಕ ಆಡಳಿತ ನ್ಯಾಯಮಂಡಳಿ ಕಲಬುರ್ಗಿ ಪೀಠ ಇಲ್ಲಿನ ಅರ್ಜಿ ಸಂಖ್ಯೆ: 20511/2024 ರ ಮಧ್ಯಂತರ ಆದೇಶ ದಿನಾಂಕ: 06/04/2024 ರನ್ವಯ ಮೇಲೆ ವಿವರಿಸಿದ ಅಂಶವನ್ನು ಈ ಕೆಳಗಿನಂತೆ ಮಾರ್ಪಡಿಸಿ ಆದೇಶಿದೆ.
ದಿನಾಂಕ: 27/04/2015ರನ್ವಯ ನೌಕರರು ನೇಮಕಾತಿ ಹೊಂದಿದ ದಿನಾಂಕದಿಂದ ಕನಿಷ್ಟ 10 ವರ್ಷಗಳ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ಈ ಅವಧಿಯಲ್ಲಿ ಅವರು ಮುಂಬಡ್ತಿ ಹೊಂದಿದ್ದರೆ ಎರಡೂ ವೃಂದಗಳಲ್ಲಿ ಸೇವೆ ಸಲ್ಲಿಸಿದ ಅವಧಿಯನ್ನು ಪರಿಗಣಿಸಬೇಕಾಗುತ್ತದೆ. ಪ್ರತ್ಯೇಕವಾಗಿ ಪ್ರತಿ ವೃಂದದಲ್ಲಿ 10 ವರ್ಷಗಳ ಸೇವಾವಧಿ ಹೊಂದಿರುವ ಅಗತ್ಯವಿರುವುದಿಲ್ಲ” ಎಂದು ಓದಿಕೊಳ್ಳತಕ್ಕದ್ದು.
ಉಳಿದಂತೆ ಉಲ್ಲೇಖ-3ರಲ್ಲಿರುವ ವರ್ಗಾವಣಾ ಅಧಿಸೂಚನೆಯಲ್ಲಿರುವ ಅಂಶಗಳು ಯಥಾವತ್ತಾಗಿ ಮುಂದುವರೆದಿರುತ್ತದೆ ಎಂದು ಸ್ಪಷ್ಟಪಡಿಸಲಾಗಿರುತ್ತದೆ.