ಬೆಂಗಳೂರು : 2024-25ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ/ತತ್ಸಮಾನ ವೃಂದದ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಮತ್ತು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು/ತತ್ಸಮಾನ ವೃಂದ, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ಅಧಿನಿಯಮ-2020 [2020ರ ಕರ್ನಾಟಕ ಅಧಿನಿಯಮ ಸಂಖ್ಯೆ:04] ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ನಿಯಮಗಳು-2020ರ ಹಾಗೂ ವರ್ಗಾವಣೆ ತಿದ್ದುಪಡಿ ಕಾಯ್ದೆ ಮತ್ತು ನಿಯಮಗಳು-2022ರ ಪ್ರಕಾರ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಮುಖ್ಯೋಪಾಧ್ಯಾಯರನ್ನು ಒಳಗೊಂಡಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ/ತತ್ಸಮಾನ ವೃಂದದ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು/ತತ್ಸಮಾನ ವೃಂದ, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳಿಗೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ವರ್ಗಾವಣೆ ನಿಯಮ-2020ರ ನಿಯಮ-6 ರಲ್ಲಿ ನಿಗದಿಪಡಿಸಿರುವಂತೆ ವರ್ಗಾವಣೆ(ಅನುಸೂಚಿ) ವಿಸ್ತ್ರತವಾದ ಮಾರ್ಗಸೂಚಿಗಳನ್ನೊಳಗೊಂಡಂತೆ ವೇಳಾಪಟ್ಟಿಯನ್ನು ಉಲ್ಲೇಖಿತ ಅಧಿಸೂಚನೆಯಂತೆ ಹೊರಡಿಸಲಾಗಿತ್ತು.
ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಅರ್ಜಿ ಸಂಖ್ಯೆ: 5957/2021 ರ ತೀರ್ಪಿನಂತೆ ಶಿಕ್ಷಕರ ನೇಮಕಾತಿ ಆದೇಶದಲ್ಲಿರುವ ಷರತ್ತಿನಂತೆ ಕನಿಷ್ಟ ಸೇವೆಯನ್ನು ಪಾಲಿಸಿ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಕೆಲವು ಶಿಕ್ಷಕರು ಸದರಿ ತೀರ್ಪನ್ನು ಪ್ರಶ್ನಿಸಿ ಘನ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಂಖ್ಯೆ: 19629/2024 ರಲ್ಲಿ ದಾವೆ ಹೂಡಿರುತ್ತಾರೆ. ನಂತರ ವಿಚಾರಣೆ ನಡೆಸಿದ ಘನ ನ್ಯಾಯಾಲಯವು ದಿನಾಂಕ: 05/08/20025ರಂದು ನೀಡಿರುವ ತೀರ್ಪಿನಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ಅಧಿನಿಯಮ-2020 ರಲ್ಲಿ ನಿಗದಿಪಡಿಸಿರುವಂತೆ ಕನಿಷ್ಟ ಸೇವೆಯನ್ನು ಪರಿಗಣಿಸಿ ವರ್ಗಾವಣೆಗೆ ಅವಕಾಶ ಕಲ್ಪಿಸುವಂತೆ ತೀರ್ಪು ನೀಡಿರುತ್ತದೆ. ಅದರಂತೆ ಕೆಳಕಂಡಂತೆ ಸ್ಪಷ್ಟಿಕರಣ ನೀಡಿದೆ.
ಈ ಹಿನ್ನೆಲೆಯಲ್ಲಿ ದಿನಾಂಕ: 29/05/2025 ರ ವರ್ಗಾವಣಾ ಅಧಿಸೂಚನೆಯ ಪುಟ ಸಂಖ್ಯೆ: 5 ರ ಪ್ಯಾರಾ 2 ರ 4ನೇ ಸಾಲಿನಲ್ಲಿ “ಶಿಕ್ಷಕರ ನೇಮಕಾತಿ ಆದೇಶದಲ್ಲಿರುವ ಷರತ್ತುಗಳೇ ಅಂತಿಮವಾಗಿರುತ್ತದೆ ” ಎಂಬುದನ್ನು ತೆಗೆದುಹಾಕಲಾಗಿದೆ. ಇತರೆ ಎಲ್ಲಾ ಷರತ್ತುಗಳು ವರ್ಗಾವಣೆ ಕಾಯ್ದೆ ಮತ್ತು ನಿಯಮಗಳು-2020 ಮತ್ತು ತಿದ್ದುಪಡಿ ಕಾಯ್ದೆ/ನಿಯಮ-2022ರ ನಿಯಮಗಳು ಯಥಾಸ್ಥಿತಿಯಲ್ಲಿರುತ್ತದೆ.
ಮುಂದುವರೆದು, ದಿನಾಂಕ: 29/05/2025 ರ ವರ್ಗಾವಣಾ ಅಧಿಸೂಚನೆಯ ಪುಟ ಸಂಖ್ಯೆ: 10 ಕ್ರಮ ಸಂಖ್ಯೆ-6 ರಲ್ಲಿನ “ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ನಿಗದಿಪಡಿಸಿದ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ ಮೆರಿಟ್ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಜೇಷ್ಠತಾ ಕ್ರಮಾಂಕವನ್ನು ನಿಗದಿಪಡಿಸಲಾಗುವುದು. ಇಬ್ಬರು ಶಿಕ್ಷಕರ ಅಂಕ ಸಮವಾಗಿದ್ದಲ್ಲಿ ಸೇವೆಗೆ ಸೇರಿದ ದಿನಾಂಕ ನಂತರ ಜನ್ಮದಿನಾಂಕವನ್ನು ಪರಿಗಣಿಸಲಾಗುವುದು” ಎಂಬುದರ ಬದಲಿಗೆ “ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಆದ್ಯತಾ ಕ್ರಮವನ್ನು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ ಅನುಸಾರವಾಗಿ ಸಿದ್ದಪಡಿಸಲಾಗುವುದು. ಅದರಂತೆ ಅಂಕ ಒಂದೇ ಆಗಿದ್ದರೆ ಆಗ ಜೇಷ್ಠತೆಯನ್ನು ಜನ್ಮ ದಿನಾಂಕದ ಆಧಾರದ ಮೇಲೆ ನಿರ್ಧರಿಸುವುದು. ಜನ್ಮ ದಿನಾಂಕವು ಸಹ ಒಂದೇ ಆಗಿದ್ದರೆ ಆಗ ಸೇವೆಗೆ ಸೇರಿದ ದಿನಾಂಕದ ಆಧಾರದ ಮೇಲೆ ಪರಿಗಣಿಸುವುದು” ಎಂದು ಓದಿಕೊಳ್ಳುವುದು.
ವರ್ಗಾವಣೆಗೆ ಅರ್ಜಿ ಸಲ್ಲಿಸಲು ಮತ್ತು ಆದ್ಯತೆ/ವಿನಾಯಿತಿಯನ್ನು ಕ್ಲೀಂ ಮಾಡಲು ದಿನಾಂಕ: 16/08/2025ರ ಸಂಜೆ 5-30 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಉಳಿದಂತೆ ಈ ಹಿಂದೆ ಹೊರಡಿಸಿದ ವೇಳಾಪಟ್ಟಿಯಲ್ಲಿರುವ ಮಾರ್ಗಸೂಚಿ ಅಂಶಗಳು ಮತ್ತು ವೇಳಾಪಟ್ಟಿಯ ದಿನಾಂಕಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.