ಬೆಂಗಳೂರು: ದಶಕದ ಬಳಿಕ ಆರೋಗ್ಯ ಇಲಾಖೆಯಲ್ಲಿ ಪೂರ್ಣಪ್ರಮಾಣದಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಯುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಆರೋಗ್ಯ ಸೌಧದಲ್ಲಿ ಸತತವಾಗಿ ವೈದ್ಯರು, ಸಿಬ್ಬಂದಿಗಳೊಂದಿಗೆ ವರ್ಗಾವಣೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಪ್ರಕ್ರಿಯೆಯನ್ನು ಖುದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಪರಿಶೀಲನೆ ನಡೆಸಿದರು.
ಕೌನ್ಸೆಲಿಂಗ್ ಗೆ ಅರ್ಜಿ ಹಾಕಿ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ವ್ಯವಸ್ಥೆ ಕುರಿತಂತೆ ಸಚಿವರು ಚರ್ಚೆ ನಡೆಸಿದರು.
ಹಲವು ವರ್ಷಗಳ ಬಳಿಕ ಆರೋಗ್ಯ ಇಲಾಖೆಯಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಸುತ್ತಿರುವುದಕ್ಕೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಆರೋಗ್ಯ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿಗಳು ಧನ್ಯವಾದ ತಿಳಿಸಿದರು. ಪಾರದರ್ಶಕವಾಗಿ ಕೌನ್ಸೆಲಿಂಗ್ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುತ್ತಿದೆಯಾ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಸಿಬ್ಬಂದಿಗಳೊಂದಿಗೆ ಚರ್ಚಿಸಿ, ಪರಿಶೀಲನೆ ನಡೆಸಿದರು.. ಸಚಿವರ ಪರಿಶೀಲನೆ ವೇಳೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಇಲಾಖೆ ಆಯುಕ್ತರಾದ ಕೆ.ಬಿ ಶಿವಕುಮಾರ್ ಅವರು ಉಪಸ್ಥಿತರಿದ್ದರು.
ಇಲ್ಲಿಯ ವರೆಗೆ ಕೌನ್ಸಿಲಿಂಗ್ ಗೆ ಒಟ್ಟು 5148 ಅರ್ಜಿ ಸಲ್ಲಿಸಿದ್ದು, ಒಟ್ಟು 4636 ವೈದ್ಯರು/ಸಿಬ್ಬಂದಿಗಳ ವರ್ಗಾವಣೆ ನಡೆಸಲಾಗಿದೆ. 251 ಸಿಬ್ಬಂದಿಗಳು ಕೌನ್ಸಿಲಿಂಗ್ ಗೆ ಗೈರು ಹಾಜರಾಗಿದ್ದಾರೆ. 261 ಪ್ರಕರಣಗಳಲ್ಲಿ ವಿನಾಯಿತಿ ನೀಡಲಾಗಿದೆ. ಯಾವುದೇ ಸಿಬ್ಬಂದಿ, ವೈದ್ಯರ ತಕಾರಾರುಗಳಿದ್ದರೆ ಸಲ್ಲಿಕೆ ಮಾಡಲು ಅವಕಾಶ ಕೂಡ ಕಲ್ಪಿಸಿಕೊಡಲಾಗಿದೆ.