ಬೆಂಗಳೂರು: ಬಂಡೀಪುರ ಮೀಸಲು ಅರಣ್ಯದಲ್ಲಿ ರಾತ್ರಿ 9ರವರೆಗೆ ಸಾರ್ವಜನಿಕ ವಾಹನಗಳಿಗೆ, ಆ ನಂತ್ರ ಅರಣ್ಯ ಇಲಾಖೆಯಿಂದಲೇ 2 ಬಸ್ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಿರುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಇಂದು ಅರಣ್ಯ ಅಪರಾಧಗಳ ತಡೆಗಾಗಿ ಗರುಡಾಕ್ಷಿ ಆನ್ ಲೈನ್ ಎಫ್ಐಆರ್ ವ್ಯವಸ್ಥೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದಂತ ಅವರು, ಕೇರಳದಿಂದ ನಮ್ಮ ರಾಜ್ಯಕ್ಕೆ ಬಂಡೀಪುರ ಅರಣ್ಯದ ಮೂಲಕ ಬರಲು ರಾತ್ರಿ 9 ರವರೆಗೆ ಅವಕಾಶವನ್ನು ನೀಡಲಾಗಿದೆ. ಅಲ್ಲದೇ ರಾತ್ರಿ 9ರ ನಂತ್ರ ಎರಡು ಬಸ್ ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ವನ್ಯ ಜೀವಿ ಸಂರಕ್ಷಣೆ ಆಗಬೇಕು. ಉಭಯ ರಾಜ್ಯಗಳ ಸಂಬಂಧ ಕೂಡ ಉಳಿಯಬೇಕು ಎಂದರು.
ಇದೇ ಸಂದರ್ಭದಲ್ಲಿ ಸಚಿವ ಈಶ್ವರ್ ಖಂಡ್ರೆ ಗರುಡಾಕ್ಷಿ ತಂತ್ರಾಂಶ ಬಿಡುಗಡೆ ಮಾಡಿದರು. ಈ ಬಳಿಕ ಮಾತನಾಡಿದ ಅವರು, ಅರಣ್ಯ ಅಪರಾಧ ಪ್ರಕರಣಗಳ ನಿರ್ವಹಣೆಗೆ ಆನ್ ಲೈನ್ ವೇದಿಕೆಯಾಗಿದೆ. ಇವತ್ತಿಗೆ ಅನುಗುಣವಾಗಿ ಅರಣ್ಯ ಇಲಾಖೆಯಲ್ಲಿ ಕೆಲ ಸುಧಾರಣೆ ತರುತ್ತಿದ್ದೇವೆ. ದಿನದಿಂದ ದಿನಕ್ಕೆ ಅರಣ್ಯ ಅಪರಾಧಗಳು ಹೆಚ್ಚಾಗುತ್ತಿದೆ. ಭೂಮಿ ಬೆಲೆ ಜಾಸ್ತಿ ಆಗ್ತಿರೋದ್ರಿಂದ ಅಪರಾಧ ಹೆಚ್ಚು. ಒತ್ತುವರಿಗಳು ಜಾಸ್ತಿ ಆಗ್ತಿವೆ, ನಾವು ಕೂಡ ತೆರವು ಮಾಡ್ತಿದ್ದೇವೆ. ಒಂದೇ ಒಂದು ಇಂಚು ಕೂಡ ಒತ್ತುವರಿ ಬಿಡಬಾರದು ಅಂತಾ ನಿರ್ಧರಿಸಿದ್ದೇವೆ ಎಂದರು.