ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪ್ರವಾಸವನ್ನು ಮುಂದೂಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
2024ನೇ ಮುಂಗಾರು ಮಳೆ ಪ್ರಾರಂಭವಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವಿಪರೀತ ಮಳೆಯಾಗುತ್ತಿದ್ದು, ಹಳ್ಳ, ಕೆರೆ, ನದಿಗಳು ತುಂಬಿ ಅಪಾಯಕಾರಿ ಮಟ್ಟ ತಲುಪಿದ್ದು, ತುಂಗಾನದಿ, ಭದ್ರಾ ನದಿ, ಹೇಮಾವತಿ ನದಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿನ ನದಿಗಳು ಅಪಾಯಕಾರಿ ಮಟ್ಟ ಮೀರಿ ರಸ್ತೆಯ ಮೇಲೆ ಹರಿಯುತ್ತಿದ್ದು, ಮುಳ್ಳಯ್ಯನಗಿರಿ ಮಾರ್ಗ ಮಧ್ಯೆ. ಹೊರನಾಡು, ಮೂಡಿಗೆರೆ, ಶೃಂಗೇರಿ ಮತ್ತು ಜಿಲ್ಲೆಯ ಇತರ ಪ್ರವಾಸಿ ತಾಣಗಳಲ್ಲಿ ಭೂಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಹಿಸ ಬೇಕಾಗಿರುವುದರಿಂದ ಸಾರ್ವಜನಿಕರಿಗೆ/ಪ್ರವಾಸಿಗರಿಗೆ ದಿನಾಂಕ: 15-08-2024 ರವರೆಗೆ ಅಥವಾ ಜಿಲ್ಲಾಧಿಕಾರಿಯವರ ಮುಂದಿನ ಆದೇಶದವರೆಗೆ ಈ ಕೆಳಕಂಡ ಸೂಚನೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
ಸಾರ್ವಜನಿಕರು/ಪ್ರವಾಸಿಗರು ನದಿಗಳಿಗೆ ಅಥವಾ ತಗ್ಗು ಪ್ರದೇಶಗಳಿಗೆ ಇಳಿಯದಂತೆ ಕಟ್ಟೆಚ್ಚರ ವಹಿಸುವುದು.
ಅತಿಯಾದ ಮಳೆಯಿಂದ ಧರೆ, ಗುಡ್ಡ ಕುಸಿತ ಉಂಟಾಗುವ ಸಂಭವವಿರುವುದರಿಂದ ಚಾರಣಿಗರು ಟ್ರಕ್ಕಿಂಗ್ ಮಾಡುವುದನ್ನು ತಾತ್ಕಾಲಿಕವಾಗಿ ಮುಂದೂಡುವುದು.
ಹೋಂ ಸ್ಟೇ ರೆಸಾರ್ಟ್, ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳುವ ಟ್ರಕ್ಕಿಂಗ್ ಅನ್ನು ಸಧ್ಯಕ್ಕೆ ಸ್ಥಗಿತಗೊಳಿಸುವುದು.
ರಾಜ್ಯದ ವಿವಿಧ ಸ್ಥಳಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರು ಚಿಕ್ಕಮಗಳೂರು ಜಿಲ್ಲಾ ಪ್ರವಾಸವನ್ನು ತಾತ್ಕಾಲಿಕವಾಗಿ ಮುಂದೂಡುವುದು.
ಮೇಲ್ಕಂಡ ಸೂಚನೆಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು/ಪ್ರವಾಸಿಗರು ಯಾವುದೇ ಅಪಾಯಕಾರಿ ಘಟನೆಗಳಿಗೆ ಅವಕಾಶ ಕೊಡದೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ತಿಳಿಸಲಾಗಿದೆ.