ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳಲ್ಲಿ ವಾಯುವಿಹಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಪರಿಸರದ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಸಾಂಸ್ಕೃತಿಕ ಮತ್ತು ಇನ್ನಿತರ ಕಲಾ ಚಟುವಟಿಕೆಗಳನ್ನೊಳಗೊಂಡ “ಬೆಂಗಳೂರು ಹಬ್ಬ” ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಉದ್ಯಾನವನಗಳು ಬೆಂಗಳೂರಿನ ನಾಗರಿಕರಿಗೆ ಉತ್ತಮವಾದ ಆಮ್ಲಜನಕ ಮತ್ತು ಮನೋಲ್ಲಾಸವನ್ನು ಒದಗಿಸುವ ಮೂಲವಾಗಿದೆ. “ಉದ್ಯಾನ ನಗರಿ” ಯಲ್ಲಿ ಪಾಲಿಕೆಯು 1,287 ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಿ ನಿರ್ವಹಣೆ ಮಾಡಲಾಗುತ್ತಿದೆ.
ಉದ್ಯಾನವನಗಳಿಗೆ ವೀಕ್ಷಿಸಲು ಬರುವಂತಹ ಸಾರ್ವಜನಿಕರಿಗೆ ಮತ್ತು ವಾಯುವಿಹಾರಿಗಳಿಗೆ ಅನುಕೂಲವಾಗಲೆಂದು ಉದ್ಯಾನವನಗಳಲ್ಲಿ “ಬೆಂಗಳೂರು ಹಬ್ಬ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಮ್ಮ ಪಾರಂಪರಿಕ ಸಂಸ್ಕೃತಿ, ಕಲೆಗಳು ಮತ್ತು ಇನ್ನಿತರ ಕಲಾ ಚಟುವಟಿಕೆಗಳಾದ ಡೊಳ್ಳುಕುಣಿತ, ಜಾನಪದ ಗಾಯನ, ಸುಗಮ ಸಂಗೀತ ಮತ್ತು ಜಾನಪದ ಕಲಾತಂಡಗಳನ್ನು ಒಳಗೊಂಡಂತೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 27 ವಿಧಾನಸಭಾ ಕ್ಷೇತ್ರಗಳಲ್ಲಿ 1 ವಿಧಾನ ಸಭಾ ಕ್ಷೇತ್ರಕ್ಕೆ ಒಂದರಂತೆ 27 ಉದ್ಯಾನವನಗಳಲ್ಲಿ ಮೇ-2025 ರಿಂದ ಮಾರ್ಚ್-2026 ರವರೆಗೆ ವರ್ಷವಿಡೀ ಸಾಂಸ್ಕೃತಿಕ ಮತ್ತು ಮಕ್ಕಳಿಗೆ ಉತ್ತೇಜಿಸುವ ಕಲೆಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ನಾಳೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ:
ನಗರದ ಉದ್ಯಾನವನಗಳಲ್ಲಿ ಹಮ್ಮಿಕೊಂಡಿರುವ “ಬೆಂಗಳೂರು ಹಬ್ಬ” ಕಾರ್ಯಕ್ರಮವನ್ನು ಬಸವನಗುಡಿ ವ್ಯಾಪ್ತಿಯ ಬ್ಯೂಗಲ್ ರಾಕ್ ಉದ್ಯಾನವನದಲ್ಲಿ ನಾಳೆ 17-05-2025 ರ ಸಂಜೆ 05.00 ಗಂಟೆಗೆ ಮಾನ್ಯ ಸ್ಥಳೀಯ ಶಾಸಕರಿಂದ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ.
ಈ ವೇಳೆ ಪಾಲಿಕೆಯ ಆಡಳಿತಗಾರರು, ಮುಖ್ಯ ಆಯುಕ್ತರು, ವಿಶೇಷ ಆಯುಕ್ತರುಗಳು, ವಲಯ ಆಯುಕ್ತರುಗಳು ಸೇರಿದಂತೆ ಇನ್ನಿತರೆ ಗಣ್ಯರುಗಳು/ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜಾಗೃತಿ ಜಾಥಾ ಕಾರ್ಯಕ್ರಮ:
ಕಾರ್ಯಕ್ರಮಕ್ಕೂ ಮುಂಚಿತವಾಗಿ ರಾಮಕೃಷ್ಣ ಮಠ ವೃತ್ತದಿಂದ ಬ್ಯೂಗಲ್ ರಾಕ್ ಉದ್ಯಾನವನದವರೆಗೆ “ಬೆಂಗಳೂರು ಹಬ್ಬ” ಕುರಿತಾಗಿ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಕೂಡಾ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸಬೇಕಾಗಿ ಕೋರಿದೆ.
BREAKING: ‘ಆಶಾ ಕಾರ್ಯಕರ್ತೆ’ಯರಿಗೆ ಸಿಹಿಸುದ್ದಿ: ‘ಗೌರವಧನ 1000’ ಹೆಚ್ಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ
ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಹಾಂಗ್ ಕಾಂಗ್, ಸಿಂಗಾಪುರದಲ್ಲಿ ಕಟ್ಟೆಚ್ಚರ | Covide-19