ಬೆಂಗಳೂರು: ನಾಳೆಯಿಂದ ಬಿಜೆಪಿ ನಾಯಕರು ಬೀದಿಗೆ ಇಳಿಯಲಿದ್ದಾರೆ. ಬೆಲೆ ಏರಿಕೆ, ಮುಸ್ಲೀಂ ಓಲೈಕೆ, ದಲಿತರ ಹಣ ಲೂಟಿ, ರೈತರನ್ನು ಕಡೆಗಣಿಸಿದ್ದನ್ನು ಖಂಡಿಸಲಿದ್ದಾರೆ. ನಾಳೆಯಿಂದ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆಯನ್ನು ಬಿಜೆಪಿ ಕೈಗೊಳ್ಳಲಿದೆ.
ಏಪ್ರಿಲ್.7ರ ನಾಳೆ ಮೈಸೂರಿನಲ್ಲಿ ಜನಾಕ್ರೋಶ ಯಾತ್ರೆ ಆರಂಭಗೊಳ್ಳಲಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭವಾಗಲಿದೆ. ಸಂಜೆ 4 ಗಂಟೆಗೆ ಜನಾಕ್ರೋಶ ಯಾತ್ರೆಗೆ ಚಾಲನೆ ದೊರೆಯಲಿದ್ದು, ಮೈಸೂರಿನ ಸೆಂಟ್ರಲ್ ಪೋಸ್ಟ್ ಆಫೀಸ್ ವೃತ್ತದಿಂದ ಅಶೋಕ ರಸ್ತೆ ಮಾರ್ಗವಾಗಿ ಗಾಂಧಿ ಚೌಕದವರೆಗೆ ಸುಮಾರು 1.5 ಕಿಲೋಮೀಟರ್ ಸಾಗಲಿದೆ.
ಮೊದಲ ಹಂತದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯಲಿದೆ.
ಒಟ್ಟು ನಾಲ್ಕು ಹಂತದಲ್ಲಿ ಜನಾಕ್ರೋಶ ಯಾತ್ರೆಯನ್ನು ರಾಜ್ಯಾದ್ಯಂತ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆಯಲಿದೆ. ಆ ಮೂಲಕ ರಾಜ್ಯ ಸರ್ಕಾರದ ಬೆಲೆ ಏರಿಕೆಯನ್ನು ಖಂಡಿಸಲಿದ್ದಾರೆ.