ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರ ಸಮಸ್ಯೆ, ಕುಂದು-ಕೊರತೆಗಳನ್ನು ಆಲಿಸಿ, ನಿವಾರಿಸುವ ಸಲುವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಇಂದಿನಿಂದ ಮೊದಲ ಹಂತದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಬೆಂಗಳೂರು ನಗರದಲ್ಲಿ ಇಂದಿನಿಂದ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. ಸುಮಾರು 10 ದಿನ ಜನಸ್ಪಂದನ ಕಾರ್ಯಕ್ರಮ ನಡೆಯಲಿದ್ದು, ಬಿಬಿಎಂಪಿ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಈ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ಮೂಲ ಉದ್ದೇಶ ಸರ್ಕಾರಿ ಕಚೇರಿಗೆ ಜನರು ಅಲೆಯುವುದನ್ನು ತಡೆಯಲು ಅವರ ಮನೆ ಬಾಗಿಲಿನಲ್ಲಿಯೇ ಸಮಸ್ಯೆ ಗಳನ್ನು ಬಗೆಹರಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜನತೆಗೆ ಸಮಸ್ಯೆಯಿಂದ ಮುಕ್ತಿ ನೀಡುವುದು ಆಗಿದೆ. ಇಂದು ಬಿಬಿಎಂಪಿ ವ್ಯಾಪ್ತಿಯ 8 ವಲಯ ಗಳಲ್ಲಿನ 28 ವಿಧಾನಸಭಾ ವ್ಯಾಪ್ತಿ ಯಲ್ಲೂ ಹಂತಹಂತವಾಗಿ ಕಾರ್ಯಕ್ರಮ ನಡೆಸಲಾಗುವುದು. ಮೊದಲ ಹಂತದಲ್ಲಿ ಜ. 3 ರಂದು ಮಹದೇವಪುರ ವಲಯ, ಜ. 5ರಂದು ಯಲಹಂಕ ಹಾಗೂ ಜ. 6ರಂದು ಪೂರ್ವ ವಲಯ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆಗಳನ್ನು ಖುದ್ದು ಡಿ.ಕೆ. ಶಿವಕುಮಾರ್ ಅವರೇ ಆಲಿಸಿ, ಪರಿಹಾರ ನೀಡಲಿದ್ದಾರೆ.