ಬೆಂಗಳೂರು: ರಾಜ್ಯದಲ್ಲಿ ದ್ವಿಚಕ್ರ ವಾಹನಗಳು ಎಷ್ಟು ರಸ್ತೆಗೆ ಇಳಿಯುತ್ತಿವೆಯೋ ಅಷ್ಟೇ ಪ್ರಮಾಣದಲ್ಲಿ ಅವುಗಳ ಕಳ್ಳತನ ಕೂಡ ನಡೆಯುತ್ತಿದೆ. ಈ ಕಳ್ಳತನಕ್ಕೆ ಬಹುಮುಖ್ಯ ಕಾರಣ, ದ್ವಿ-ಚಕ್ರ ವಾಹನಗಳನ್ನು ಸುರಕ್ಷಿತವಾಗಿ ಇಡುವುದಕ್ಕೆ ರಕ್ಷಣಾ ತಂತ್ರಗಳನ್ನು ಅಳವಡಿಸಿಕೊಳ್ಳದೇ ಇರುವುದಾಗಿದೆ. ಹಾಗಾದ್ರೆ ದ್ವಿ-ಚಕ್ರ ವಾಹನಗಳ ಕಳ್ಳತನ ತಡೆಗಟ್ಟುವುದು ಹೇಗೆ ಎನ್ನುವ ಬಗ್ಗೆ ಮುಂದಿದೆ ಮಾಹಿತಿ.
ಬೆಂಗಳೂರು ನಗರ ಪೊಲೀಸ್ ಇಲಾಖೆಯು ಸಾರ್ವಜನಿಕ ಪ್ರಕಟಣೆಯಲ್ಲಿ ಈ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರು ನಗರದಲ್ಲಿ ಒಟ್ಟು ಸುಮಾರು 80 ಲಕ್ಷ ದ್ವಿ-ಚಕ್ರ ವಾಹನಗಳಿದ್ದು, ಪ್ರತಿದಿನ ಸುಮಾರು ಒಂದೂವರೆಯಿಂದ ಎರಡು ಸಾವಿರ ವಾಹನಗಳು ಹೊಸದಾಗಿ ನೋಂದಣಿಯಾಗುತ್ತಿದ್ದು, ಇವುಗಳಲ್ಲಿ ಕಳೆದ ಮೂರು ವರ್ಷಗಳಿಂದ ಪ್ರತಿನಿತ್ಯ ಸರಾಸರಿ ಅಂದಾಜು 14 ರಿಂದ 16 ವಾಹನಗಳು ಕಳ್ಳತನವಾಗುತ್ತಿರುತ್ತವೆ ಎಂದು ಹೇಳಿದೆ.
ಬೆಂಗಳೂರು ನಗರದ ಸಾರ್ವಜನಿಕರಿಗೆ ನಗರದಲ್ಲಿ ಆಗುತ್ತಿರುವ ಈ ದ್ವಿ-ಚಕ್ರ ವಾಹನಗಳ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ವಹಿಸಲು ನಗರ ಪೊಲೀಸ್ ವತಿಯಿಂದ ಈ ಕೆಳಕಂಡ ಸೂಚನೆಗಳನ್ನು ನೀಡಲಾಗುತ್ತಿದೆ.
ದ್ವಿ-ಚಕ್ರ ವಾಹನಗಳ ಕಳ್ಳತನಕ್ಕೆ ಕಾರಣಗಳು:
1. ವಾಹನಗಳನ್ನು ಸೂಕ್ತ ಎಚ್ಚರಿಕೆ ಇಲ್ಲದೆ ನಿಲ್ಲಿಸುವುದು.
2. ವಾಹನ ನಿಲ್ಲಿಸಿದಾಗ ಅದರಲ್ಲಿಯೇ ವಾಹನದ ಕೀಯನ್ನು ಬಿಟ್ಟು ಹೋಗುವುದು.
3. ಸುಲಭವಾಗಿ ಹ್ಯಾಂಡಲ್ ಲಾಕ್‌ಗಳನ್ನು ಮುರಿಯುವಂತಹ ವಾಹನಗಳನ್ನು ಬಳಸುವುದು.
4. ಸೂಕ್ತ ಸುರಕ್ಷತಾ ಕ್ರಮಗಳಿಲ್ಲದ ಹಳೆಯ ವಾಹನಗಳನ್ನು ಬಳಸುವುದು.
5.ಸಿ.ಸಿ ಟಿ.ವಿ ಕವರೇಜ್ ಇಲ್ಲದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವುದು.
6. ಸಾರ್ವಜನಿಕರಿಗೆ ಕಾಣದಂತೆ ನಿರ್ಜನ ಮತ್ತು ಕತ್ತಲಿನ ಪ್ರದೇಶಗಳಲ್ಲಿ ವಾಹನ ನಿಲ್ಲಿಸುವುದು.
7. ಸೂಕ್ತ anti-theft measurement ಗಳನ್ನು ಅಳವಡಿಸದೇ ಇರುವುದು.
ಮೇಲ್ಕಂಡ ಕಳ್ಳತನವನ್ನು ತಡೆಗಟ್ಟುವಲ್ಲಿ ಕೈಗೊಳ್ಳಬಹುದಾದ ಕ್ರಮಗಳು
1. Anti-theft ಕ್ರಮಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದು. ವಾಹನಗಳಿಗೆ ಜಿ.ಪಿ.ಎಸ್ ಸಿಸ್ಟಮ್ ಅಳವಡಿಸುವುದು.
a) Wheel Locking ಸಿಸ್ಟಮ್‌ಗಳನ್ನು ಅಳವಡಿಸುವುದು.
b) Hand lock ಗಳು ಗಟ್ಟಿ ಮುಟ್ಟಾಗಿರುವಂತೆ ನೋಡಿಕೊಳ್ಳುವುದು.
d) CCTV ಇರುವ ವ್ಯಾಪ್ತಿ ಪ್ರದೇಶದಲ್ಲೇ ನಿಲ್ಲಿಸುವುದು.
e) ನಿರ್ಜನ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ತಪ್ಪಿಸುವುದು.
f) ವಾಹನ ನಿಲ್ಲಿಸಿದಾಗ ಕೀ ಬಿಟ್ಟು ಹೋಗದೇ ಇರುವುದು.
g) ನಕಲಿ ಕೀ ಬಳಸಿ ಅಥವಾ ಸರ್ಕ್ಯುಟ್ ಬ್ರೇಕ್ ಮಾಡಿ ವಾಹನ ಕಳ್ಳತನಕ್ಕೆ ಪ್ರಯತ್ನಿಸಿದಲ್ಲಿ ಸೈರನ್ ಆಗುವಂತಹ ವ್ಯವಸ್ಥೆ ಅಥವಾ ಮೊಬೈಲ್‌ಗೆ ಮಾಹಿತಿ ಬರುವಂತಹ ವ್ಯವಸ್ಥೆ ಮಾಡಿಕೊಳ್ಳುವುದು.
ಮೇಲ್ಕಂಡ ಅಂಶಗಳನ್ನು ಪರಿಣಾಮಕಾರಿ ಬಳಸುವುದರಿಂದ ವಾಹನ ಕಳ್ಳತನವನ್ನು ತಡೆಹಿಡಿಯಬಹುದಾಗಿದೆ ಎಂಬುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಹೇಳಿದ್ದಾರೆ.