ತುಮಕೂರು: ಜಿಲ್ಲೆಯ ಕೊರಟಗೆರೆಯಲ್ಲಿ ಖಾಸಗಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ತುಮಕೂರು ತಾಲೂಕಿನ ಬೆಳಧರ ಗ್ರಾಮದ ಬಳಿ ಖಾಸಗಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿ ತೆರಳುತ್ತಿದ್ದಂತ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೇ, ಮತ್ತಿಬ್ಬರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ.
ತುಮಕೂರು ಕೂರಿನಿಂದ ಪಾವಗಡದತ್ತ ಖಾಸಗಿ ಬಸ್ ತೆರಳುತ್ತಿತ್ತು. ಕೊರಟಗೆರೆಯಿಂದ ಧರ್ಮಸ್ಥಳಕ್ಕೆ ಕಾರು ತೆರಳುತ್ತಿತ್ತು. ಈ ಅಪಘಾತದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಭೈಚಾರಪುರ ಗ್ರಾಮದ ಶಿವಶಂಕರ್(30), ಕೊರಟಗೆರೆಯ ಶಿವಕುಮಾರ್(27) ಹಾಗೂ ಗೋವಿಂದಪ್ಪ(50) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೂ ಈ ಅಪಘಾತದಲ್ಲಿ ಗಾಯಗೊಂಡಿರುವಂತ ರೆಡ್ಡಿಹಳ್ಳಿಯ ಶಂಕರ್(28) ಎಂಬಾತನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಿತ್ತಿನಾಗೇನಹಳ್ಳಿಯ ವೇಣುಗೋಪಾಲ್ ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ನಂತ್ರ ಸ್ಥಳದಿಂದ ಖಾಸಗಿ ಬಸ್ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.