ದುಬೈ: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಅಮೆರಿಕವು ಮಧ್ಯಪ್ರಾಚ್ಯಕ್ಕೆ ಸಾವಿರಾರು ಹೆಚ್ಚುವರಿ ಸೈನಿಕರನ್ನು ರವಾನಿಸಿದೆ. ಇದು ಕಳೆದ ಎರಡು ದಶಕಗಳಲ್ಲಿ (2003ರ ಇರಾಕ್ ಯುದ್ಧದ ನಂತರ) ಈ ಪ್ರದೇಶದಲ್ಲಿ ಅಮೆರಿಕ ಕೈಗೊಂಡಿರುವ ಅತಿದೊಡ್ಡ ಮಿಲಿಟರಿ ಜಮಾವಣೆಯಾಗಿದೆ.
ಅಮೆರಿಕದ ನೌಕಾಪಡೆಯ ‘ಯುಎಸ್ಎಸ್ ಟ್ರಿಪೋಲಿ’ (USS Tripoli) ಯುದ್ಧನೌಕೆಯ ಮೂಲಕ ಸುಮಾರು 3,500ಕ್ಕೂ ಹೆಚ್ಚು ಮರೀನ್ ಸೈನಿಕರು ಈ ಭಾಗಕ್ಕೆ ಬಂದು ತಲುಪಿದ್ದಾರೆ. ಇವರೊಂದಿಗೆ ಅತ್ಯಾಧುನಿಕ ಎಫ್-35 ಬಿ (F-35B) ಫೈಟರ್ ಜೆಟ್ ಹಾಗೂ ಅಟ್ಯಾಕ್ ಹೆಲಿಕಾಪ್ಟರ್‌ಗಳೂ ಇವೆ.
ಈಗಿನ ನಿಯೋಜನೆಯೊಂದಿಗೆ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಒಟ್ಟು ಸೈನಿಕರ ಸಂಖ್ಯೆ 50,000 ದಾಟಿದೆ. ಅಲ್ಲದೆ, ಸ್ಯಾನ್ ಡಿಯಾಗೋದಿಂದ ಮತ್ತೊಂದು ತಂಡ (11th MEU) ಶೀಘ್ರದಲ್ಲೇ ಬರಲಿದೆ ಎಂದು ವರದಿಯಾಗಿದೆ.ಕೇವಲ ನೌಕಾಪಡೆ ಮಾತ್ರವಲ್ಲದೆ, ಅಮೆರಿಕದ ಎಲೈಟ್ ’82ನೇ ಏರ್‌ಬೋರ್ನ್ ಡಿವಿಷನ್’ನ ಸುಮಾರು 3,000 ಪ್ಯಾರಾಟ್ರೂಪರ್‌ಗಳನ್ನೂ ಸಹ ತುರ್ತು ಕಾರ್ಯಾಚರಣೆಗಾಗಿ ಸಜ್ಜುಗೊಳಿಸಲಾಗಿದೆ.
ಇರಾನ್‌ನ ಪರಮಾಣು ಸ್ಥಾವರಗಳು ಮತ್ತು ಕ್ಷಿಪಣಿ ನೆಲೆಗಳ ಮೇಲೆ ದಾಳಿ ನಡೆಸಲು ಹಾಗೂ ಹಾರ್ಮುಜ್ ಜಲಸಂಧಿಯ ಭದ್ರತೆಯನ್ನು ಕಾಪಾಡಲು ಈ ಬೃಹತ್ ಸೈನ್ಯವನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಇರಾನ್ ಮೇಲೆ ‘ಗರಿಷ್ಠ ಒತ್ತಡ’ ಹೇರುವ ತಂತ್ರದ ಭಾಗವಾಗಿ ಈ ಬೃಹತ್ ಸೇನಾ ಜಮಾವಣೆಗೆ ಆದೇಶ ನೀಡಿದೆ.







