ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜಿ.ಎಂ ತೋಟಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಬಾಪಟ್ ಅವರನ್ನು ನೇಮಕ ಮಾಡಲಾಯಿತು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರ ಆಯ್ಕೆಗಾಗಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಜಿಎಂ ತೋಟಪ್ಪ ಹಾಗೂ ನುಡಿಗಿಡ ರಾಘವೇಂದ್ರ ಬಾಪಟ್ ಅವರು ಸ್ಪರ್ಧೆ ಮಾಡಿದ್ದರು. ಚುನಾವಣೆ ಸಂದರ್ಭದಲ್ಲಿ ಇಬ್ಬರಿಗೂ ತಲಾ 7 ಮತಗಳು ಚಲಾವಣೆಯಾಗಿ ಸಮಗೊಂಡಿದ್ದವು.
ಶಿವಮೊಗ್ಗ ಜಿಲ್ಲಾ ಸಮಿತಿಯಿಂದ ಆಗಮಿಸಿದ್ದಂತ ಅಧ್ಯಕ್ಷರಾದಂತ ವೈದ್ಯ, ಉಪಾಧ್ಯಕ್ಷರಾದಂತ ಹುಚ್ಚರಾಯಪ್ಪ, ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ಕೋಶಾಧ್ಯಕ್ಷರಾದಂತ ರೋಹಿತ್, ರಾಜ್ಯ ಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್ ಅವರು ಇಬ್ಬರನ್ನು ಮನವೊಲಿಸಿದ ಬಳಿಕ ಹಿರಿತನದಲ್ಲಿ ಜಿ.ಎಂ.ತೋಟಪ್ಪ ಅವರನ್ನು ಅಧ್ಯಕ್ಷರನ್ನಾಗಿ, ರಾಘವೇಂದ್ರ ಬಾಪಟ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ಮಾತನಾಡಿದಂತ ಶಿವಮೊಗ್ಗ ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ವೈದ್ಯ ಅವರು, ಹಿಂದಿನ ವಿಷಯಗಳನ್ನು ಬಿಡಿ. ಸಂಘ ನಿಮ್ಮದೆಂದು ಒಟ್ಟಾಗಿ ಮುನ್ನಡೆಯಿರಿ. ಎಲ್ಲಾ ಕೆಲಸಗಳಲ್ಲೂ ಒಕ್ಕೊರಲಿನಿಂದ ಭಾಗಿಯಾಗಿ. ಎಲ್ಲಾ ತಾಲ್ಲೂಕಿನ ಸಂಘದ ಪದಾಧಿಕಾರಿಗಳ ನೇಮಕಾತಿಯ ನಂತ್ರ ಜಿಲ್ಲಾ ಸಂಘದ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಅದರ ಭಾಗವಾಗಿ ಸೊರಬ ತಾಲ್ಲೂಕು ಕೆಯುಡಬ್ಲ್ಯೂಜೆ ಸಂಘಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸೊರಬ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು








