ರಾಮನಗರ: “ಈ ಕ್ಷೇತ್ರದಲ್ಲಿ ನೆಂಟರಂತೆ ಬಂದು ಎಲ್ಲಾ ಅಧಿಕಾರ ಅನುಭವಿಸಿ, ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡದವರು ನೆಂಟರಂತೆ ಹೋಗಲಿ. ನಿಮ್ಮ ಮನೆ ಮಕ್ಕಳಂತೆ ನಾನು, ಸಿ.ಪಿ ಯೋಗೇಶ್ವರ್, ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಸರ್ಕಾರದ ಬೆಂಬಲದೊಂದಿಗೆ ನಿಮ್ಮ ಸೇವೆ ಮಾಡುತ್ತೇವೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ದೊಡ್ಡಮಳೂರಿನಲ್ಲಿ ಸೋಮವಾರ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಡಿ.ಕೆ. ಸುರೇಶ್ ಅವರು ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಪರವಾಗಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು:
ಚನ್ನಪಟ್ಟಣದ ಮತದಾರರಿಗೆ ಕುಮಾರಸ್ವಾಮಿ ಅಪಮಾನ:
ಕುಮಾರಸ್ವಾಮಿ ಅವರು ನಿಮ್ಮ ಆಶೀರ್ವಾದದಿಂದ ಎರಡನೇ ಬಾರಿಗೆ ವಿಧಾನಸೌಧಕ್ಕೆ ಪ್ರವೇಶ ಮಾಡಿದಾಗ ಕುಮಾರಸ್ವಾಮಿ ಅವರು ಏನು ಹೇಳಿದರು? ಶಾಸಕರಾಗಿ ಆಯ್ಕೆಯಾದ ನಂತರ ಐದು ವರ್ಷಗಳ ಕಾಲ ಜನರ ಮಧ್ಯೆ ಇರಬಾರದು, ನಿಮಗಾಗಿ ಕೆಲಸ ಮಾಡಬಾರದು. ಚುನಾವಣೆ ಸಮಯದಲ್ಲಿ ತಂತ್ರಗಾರಿಕೆ ಮಾಡಿ ಕಣ್ಣೀರು ಹಾಕಿ ಮತ ಕೇಳಿದರೆ ಸಾಕು ಎಂದು ಹೇಳಿದ್ದಾರೆ. ಇದು ಈ ತಾಲೂಕಿನ ಜನತೆಗೆ ಮಾಡಿರುವ ಅಪಮಾನ. ಇಂತಹ ಧೋರಣೆ ಹೊಂದಿರುವ ಕುಟುಂಬದ ಬಗ್ಗೆ ಚನ್ನಪಟ್ಟಣದ ಮತದಾರರು ತೀರ್ಮಾನ ಮಾಡಬೇಕು. ಅವರು ಹೇಳಿದಂತೆ ಕಳೆದ 8-10 ದಿನಗಳಿಂದ ಚುನಾವಣಾ ತಂತ್ರಗಾರಿಕೆ ಮಾಡಿಕೊಂಡು ಈಗ ಬಂದಿದ್ದಾರೆ. ಸಿದ್ದರಾಮಯ್ಯ ಅವರು ಹದಿನೈದು ದಿನಕ್ಕೊಮ್ಮೆ ಮೈಸೂರಿಗೆ ಹೋಗುತ್ತಾರೆ. ಡಿ.ಕೆ. ಶಿವಕುಮಾರ್ ಅವರು ಹದಿನೈದು ದಿನಕ್ಕೊಮ್ಮೆ ಕನಕಪುರಕ್ಕೆ ಹೋಗುತ್ತಾರೆ. ಕಾರಣ ಅವರಿಗೆ ತಮ್ಮ ಮತದಾರರ ಋಣ ತೀರಿಸುವ ಬದ್ಧತೆ ಇದೆ. ಕಷ್ಟ ಸುಖ ಕೇಳುವ ಬದ್ಧತೆ ಇದೆ. ಆದರೆ ಕುಮಾರಸ್ವಾಮಿ ಅವರು ಐದು ವರ್ಷಕ್ಕೊಮ್ಮೆ ಹಣ ಹಂಚಿದರೆ ಸಾಕು ಎಂಬ ಧೋರಣೆ ಇದೆ. ಜಾತಿ ಹೆಸರಲ್ಲಿ ಕಣ್ಣೀರು ಹಾಕಿದರೆ ಸಾಕು.
ನೀವು ನಿಮ್ಮ ರಾಜಕೀಯ ಜೀವನದಲ್ಲಿ ಯಾರನ್ನು ಯಾವ ರೀತಿ ಬಳಸಿಕೊಂಡಿದ್ದೀರಿ? ಹೇಗೆ ಮೋಸ ಮಾಡಿದ್ದೀರಿ ಎಂದು ಆಲೋಚಿಸಿ. ಕುಮಾರಸ್ವಾಮಿ ಅವರು ನನ್ನ ಹೇಳಿಕೆಯನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರಸ್ತಾಪ ಮಾಡಿದ್ದೀರಿ. ಯೋಗೇಶ್ವರ್ ಹಾಗೂ ನಾನು 30 ವರ್ಷಗಳ ಹಳೇ ಸ್ನೇಹಿತರು. ಆತ ನನ್ನ ಬೈಯ್ಯುತ್ತಾನೆ. ನಾನು ಆತನಿಗೆ ಬೈಯ್ಯುತ್ತೇನೆ. ನೀವು ಯಾರನ್ನು ಬೈದಿದ್ದೀರಿ ಗೊತ್ತಾ? ನೀವು ಮತದಾರರನ್ನು ನಿಂದಿಸಿದ್ದೀರಿ. ನಮ್ಮ ವಾಗ್ವಾದ ವೈಯಕ್ತಿಕವಾದುದ್ದು. ನೀವು ಟೀಕೆ ಮಾಡಿರುವುದು ನಿಮಗೆ ಆಶೀರ್ವಾದ ಮಾಡಿರುವ ಜನರಿಗೆ. ಇದಕ್ಕೆ ನೀವು ಉತ್ತರಿಸಿ.
ಕುಮಾರಸ್ವಾಮಿ ಒಂದು ದಿನ ಬಂದು ನಿಮ್ಮ ಕಷ್ಟ ಕೇಳಲಿಲ್ಲ:
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ ಕ್ಷೇತ್ರದ ಜನರ ಕಷ್ಟ ಕೇಳಲು ಒಂದೇ ಒಂದು ದಿನ ಬರಲಿಲ್ಲ. ಜನರ ಕಷ್ಟ ಕೇಳುವುದಿರಲಿ, ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಸ್ಯೆಯನ್ನು ಆಲಿಸಲಿಲ್ಲ. ಅವರು ಸಿಎಂ ಆಗಿದ್ದಾಗ ನಿಮ್ಮ ಕಷ್ಟ ಆಲಿಸಿದ್ದಾರಾ ಎಂದು ಆತ್ಮಸಾಕ್ಷಿಯಿಂದ ಹೇಳಿ ಎಂದು ಆ ಕಾರ್ಯಕರ್ತರಲ್ಲಿ ಕೇಳಲು ಬಯಸುತ್ತೇನೆ. ಅವರ ಬಗ್ಗೆ ನಿಮಗೆ ಇಷ್ಟು ಅಂಧ ಅಭಿಮಾನ ಯಾಕೆ? ಕಾಂಗ್ರೆಸ್ ಪಕ್ಷದಿಂದ, ಡಿ.ಕೆ. ಶಿವಕುಮಾರ್, ಯೋಗೇಶ್ವರ್, ನನ್ನಿಂದ ಯಾವ ತಪ್ಪಾಗಿದೆ? ಈ ಭಾಗದ ಕೆರೆ ತುಂಬಿಸಲು ಈ ಜಿಲ್ಲೆಯ ಅಭಿವೃದ್ಧಿಗೆ ನಾವು ಶ್ರಮಿಸಿಲ್ಲವೇ? ಅವರು ಈ ಕ್ಷೇತ್ರದ ಅಭಿವೃದ್ಧಿಗೆ ಯಾವ ಯೋಜನೆ ನೀಡಿದ್ದಾರೆ ಎಂದು ಪಟ್ಟಿ ಮಾಡಿ ಹೇಳಲಿ. ಕುಮಾರಸ್ವಾಮಿ ಅವರು ಈ ಭಾಗದ ಯುವಕರಿಗೆ ಉದ್ಯೋಗ ಕೊಡಿಸುವ ಧೈರ್ಯ ತುಂಬಿದ್ದಾರಾ?
ಇದ್ಯಾವುದನ್ನು ಮಾಡದೇ ಈಗ ಕ್ಷೇತ್ರಕ್ಕೆ ಬಂದು ಡಿ.ಕೆ. ಶಿವಕುಮಾರ್, ಯೋಗೇಶ್ವರ್ ಬಗ್ಗೆ ಮಾತನಾಡುತ್ತಾರೆ. ಯೋಗೇಶ್ವರ್ ಪಕ್ಷ ಬದಲಿಸುತ್ತಾರೆ ಎಂದು ಹೇಳುವ ಕುಮಾರಸ್ವಾಮಿ ಅವರೇ ನೀವು ಮಾಡುತ್ತಿರುವುದೇನು? ನಿಮ್ಮ ಹೇಳಿಕೆಗಳೇನಿದೆ? ನಿಮಗೆ ಯಾರು ಅಧಿಕಾರ ನೀಡುತ್ತಾರೋ ಅವರ ಜತೆ ಕೈ ಜೋಡಿಸುತ್ತೀರಿ. ಇದರ ಹೊರತಾಗಿ ನಿಮ್ಮ ಬಳಿ ಯಾವ ಸಿದ್ಧಾಂತವಿದೆ? ನಮ್ಮ ಗ್ಯಾರಂಟಿ ಯೋಜನೆ ನಿಲ್ಲುತ್ತದೆ ಎಂದು ಬಹಿರಂಗ ಹೇಳಿಕೆ ನೀಡುತ್ತೀರಲ್ಲಾ, ನಿಮಗೆ ಈ ಯೋಜನೆಗಳು ಇಷ್ಟವಿಲ್ಲದಿದ್ದರೆ ಈ ಯೋಜನೆಗಳನ್ನು ನಿಲ್ಲಿಸಿ ಎಂದು ನೇರವಾಗಿ ಹೇಳಿ ನಿಮ್ಮ ತಾಕತ್ತು ಪ್ರದರ್ಶಿಸಿ. ನಿಮಗೆ ಆ ತಾಕತ್ತು ಇಲ್ಲ. ಯಾವ ಆಧಾರದ ಮೇಲೆ ಈ ಯೋಜನೆ ಟೀಕೆ ಮಾಡುತ್ತೀರಿ? ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷ ಬಡವರ ಕಣ್ಣೀರು ಒರೆಸಿದ್ದು ತಪ್ಪಾ?
ಅಭಿವೃದ್ಧಿ ಬಗ್ಗೆ ಮಾತನಾಡದ ಕುಮಾರಸ್ವಾಮಿ:
ಈ ಉಪಚುನಾವಣೆಗೆ ಬಂದಿರುವ ಕುಮಾರಸ್ವಾಮಿ ಅವರು ಎಲ್ಲಾದರೂ ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರಾ? ಅವರಿಗೆ ಕನಸಲ್ಲೆಲ್ಲಾ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಹಾಗೂ ಯೋಗೇಶ್ವರ್, ಸಿದ್ದರಾಮಯ್ಯ ಅವರದ್ದೇ ಕನವರಿಕೆ. ಇವರ ಹೊರತಾಗಿ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದಾರಾ? ಯೋಗೇಶ್ವರ್ ಈ ತಾಲೂಕಿಗೆ ನೀರು ನೀಡಿದ್ದಾರೆ. ನಾವು ಈ ತಾಲೂಕಿಗೆ ವಿದ್ಯುತ್ ನೀಡಿದ್ದೇವೆ, ಗ್ಯಾರಂಟಿ ಯೋಜನೆ ನೀಡಿದ್ದೇವೆ ಎಂದು ಮತ ಕೇಳುತ್ತಿದ್ದೇವೆ. ಆದರೆ ಕುಮಾರಸ್ವಾಮಿ ಅವರು ತಮ್ಮ ಕೆಲಸದ ಬಗ್ಗೆ ಚರ್ಚೆ ಮಾಡಿ ಮತ ಕೇಳುತ್ತಿದ್ದಾರಾ?
ಡಿ.ಕೆ. ಸಹೋದರರು ಅಪೂರ್ವ ಸಹೋದರರು ಎಂದು ವ್ಯಂಗ್ಯ ಮಾಡಿದ್ದಾರೆ. ಹೌದು, ನಾನು ಹಾಗೂ ನನ್ನ ಅಣ್ಣ ಅಪೂರ್ವ ಸಹೋದರರೆ. ನಾವು ದೇವೇಗೌಡರ ವಂಶದಂತೆ ಅಲ್ಲ. ಕುಮಾರಸ್ವಾಮಿ ಬ್ರದರ್ಸ್ ರೀತಿ ಅಲ್ಲ. ಬೇಕಾದಾಗ ಸಂಬಂಧ, ಬೇಡವಾದಾಗ ಬೇರೆ ಎನ್ನುವಂತಹವರಲ್ಲ. ಕಷ್ಟದಲ್ಲಿದ್ದರೂ ಜತೆಯಲ್ಲಿ ಇರುತ್ತೇವೆ, ಸುಖದಲ್ಲೂ ಒಟ್ಟಿಗೆ ಇದ್ದೇನೆ, ಸಾಯುವಾಗಲೂ ಜತೆಯಲ್ಲೇ ಇರುತ್ತೇನೆ. ನಿಮ್ಮಂತೆ ಅಣ್ಣ ಹಾಗೂ ಆತಮ ಮಕ್ಕಳು ಕಷ್ಟದಲ್ಲಿರುವಾಗ ಅವನು ಬೇರೆ, ನಾನು ಬೇರೆ ಎಂದು ಹೇಳುವ ನೀಚ ಪ್ರವೃತ್ತಿ ನನ್ನದಲ್ಲ.
ದೇವೇಗೌಡರೇ ನಿಮ್ಮ ನೈತಿಕತೆ ಎಲ್ಲಿ ಹೋಯಿತು?
ದೇವೇಗೌಡರೇ ನಾನು ಯಾವ ವಿಚಾರ ಮಾತನಾಡಲಿ, ನನಗೆ ಹೃದಯ ಇದೇಯೇ? ಇಲ್ಲವಲ್ಲ? ಕಣ್ಣೀರು ಹಾಕುವವರಿಗೆ ಹೃದಯ ಇರಬೇಕು ಎಂದಿದ್ದೀರಿ. ನಿಮ್ಮ ಹೃದಯ ಯಾವಾಗ ಕೆಲಸ ಮಾಡಬೇಕಿತ್ತು ಗೊತ್ತಾ? ನಿಮ್ಮನ್ನು ಸಾಕಿ ಸಲುಹಿ ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಧಾನಮಂತ್ರಿ ಸ್ಥಾನದವರೆಗೂ ಬೆಳೆಸಿದರಲ್ಲಾ ಅಂತಹ ತಾಯಂದಿರ ಮಾನವನ್ನು ನಿಮ್ಮ ಮೊಮ್ಮಕ್ಕಳು ಹಾರಾಜು ಹಾಕುವಾಗ ಕಣ್ಣೀರು ಹಾಕಬೇಕಿತ್ತು. ನನ್ನ ಮೊಮ್ಮಕ್ಕಳು ತಪ್ಪು ಮಾಡಿದ್ದಾರೆ. ನನ್ನನ್ನು ಕ್ಷಮಿಸಿ ಎಂದು ಕೇಳಬೇಕಿತ್ತು. ಆಗ ನಿಮ್ಮ ಆತ್ಮಗೌರವ ಉಳಿದು, ಘನತೆ ಹೆಚ್ಚುತ್ತಿತ್ತು. ನಿಮ್ಮ ಜತೆ ರಾಜಕಾರಣ ಮಾಡಿದ ಜೆಡಿಎಸ್ ಕಾರ್ಯಕರ್ತರ ಮನೆ ಹೆಣ್ಣು ಮಕ್ಕಳು, ಊಟಕ್ಕಾಗಿ ನಿಮ್ಮ ಮನೆಯಲ್ಲಿ ಕೂಲಿ ಮಾಡಿದವರ ಮೇಲೆ ಅತ್ಯಾಚಾರ ನಡೆದಾಗ ನೀವು ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳಿಂದ ತಪ್ಪಾಗಿದೆ ಎಂದು ಹೇಳಬೇಕಿತ್ತು.
ಕಾಂಗ್ರೆಸ್ ನವರು ನನ್ನನ್ನು ಮೂರು ತಿಂಗಳು ಕೂಡಿಹಾಕಿದ್ದರು ಎಂದು ಹೇಳಿದ್ದೀರಿ. ನಾನು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಕೂಡಿಹಾಕಿದ್ದರೇ? ದೇವೇಗೌಡರೇ ನಿಮ್ಮನ್ನು ಕೂಡಿ ಹಾಕಿದ್ದು ಕಾಂಗ್ರೆಸ್ ನವರಲ್ಲ. ನಿಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳು ಎಂಬುದನ್ನು ಮರೆಯಬೇಡಿ. ಯಾಕೆ ಎಲ್ಲಾ ಆರೋಪಗಳನ್ನು ಕಾಂಗ್ರೆಸ್ ನವರ ಮೇಲೆ ಹಾಕುತ್ತೀರಿ. ನೀವು ಇಂದು ಉಪ ಚುನಾವಣೆ ಮಾಡುತ್ತಿರುವುದು ಚನ್ನಪಟ್ಟಣದ ಬಡ ಜನರಿಗಾಗಿಯೇ? ಬಡ ರೈತರಿಗಾಗಿಯೇ? ನಿಮ್ಮ ಮೊಮ್ಮಗ ಹಾಸನದಲ್ಲಿ ಅಪಚಾರ ಮಾಡಿದಾಗ ಒಂದು ದಿನ ಹೋಗಿ ಅಲ್ಲಿನ ಜನರ ಬಳಿ ಕ್ಷಮೆ ಕೇಳಲಿಲ್ಲ. ಇಲ್ಲಿ ಬಂದು 8 ದಿನಗಳಿಂದ ಚುನಾವಣಾ ಪ್ರಚಾರ ಮಾಡುತ್ತಿದ್ದೀರಲ್ಲಾ ನಿಮ್ಮ ನೈತಿಕತೆ ಎಲ್ಲಿ ಹೋಯಿತು?
ನಿಮ್ಮ ಪಕ್ಷದವರ ಏಳಿಗೆ ಸಹಿಸದ ನೀವು ಡಿ.ಕೆ ಸಹೋದರರು, ಯೋಗೇಶ್ವರ್ ಏಳಿಗೆ ಸಹಿಸುತ್ತೀರಾ?
ನೀವು ನನ್ನ ಮೇಲೆ, ನನ್ನ ಸಹೋದರನ ಮೇಲೆ, ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿ ಸಂತೋಷ. ಯೋಗೇಶ್ವರ್ ಅವರನ್ನು ಕರೆದುಕೊಂಡಿದ್ದು ಯಾರು? ನಾನು, ಸಿದ್ದರಾಮಯ್ಯ, ಶಿವಕುಮಾರ್ ಕರೆದುಕೊಂಡರಾ? ನೀವು ನಿಮ್ಮ ರಾಜಕೀಯ ಜಿವನದಲ್ಲಿ ಎಷ್ಟು ಜನರನ್ನು ರಾಜಕೀಯವಾಗಿ ಬೆಳೆಯಲು ಬಿಟ್ಟಿಲ್ಲ ಎಂಬ ದೊಡ್ಡ ಪಟ್ಟಿಯೇ ಇದೆ. ನಿಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಬಿಟ್ಟರೆ ಬೇರೆ ಯಾರನ್ನೂ ನೀವು ರಾಜಕೀಯವಾಗಿ ಬೆಳೆಸಲೇ ಇಲ್ಲ. ನಿಮ್ಮ ಪಕ್ಷದವರ ಏಳಿಗೆಯನ್ನೇ ಸಹಿಸದ ನೀವು, ನನ್ನ ಹಾಗೂ ಡಿ.ಕೆ. ಶಿವಕುಮಾರ್ ಏಳಿಗೆ ಸಹಿಸುತ್ತೀರಾ?
ರಾಮಕೃಷ್ಣ ಹೆಗಡೆ, ಜೆ.ಹೆಚ್ ಪಟೇಲ್, ಎಸ್.ಆರ್ ಬೊಮ್ಮಾಯಿ, ಹಾಸನದ ಪುಟ್ಟಸ್ವಾಮಿಗೌಡರು, ವೈ.ಕೆ ರಾಮಯ್ಯ, ಮಾದೇಗೌಡರು, ರಮೇಶ್ ಕುಮಾರ್, ಅಂಬರೀಶ್, ನಿಮ್ಮ ಮನೆಮಗನಂತೆ ಇದ್ದ ಬಿ.ಎಲ್ ಶಂಕರ್, ಮುದ್ದಹನುಮೇಗೌಡರು, ಮಳವಳ್ಳಿ ನಾಗೇಗೌಡರು, ಭೈರೇಗೌಡರು, ನಿಮ್ಮ ಒಡನಾಡಿ ಪಿಜಿಆರ್ ಸಿಂಧ್ಯಾ, ಸಿಎಂ ಇಬ್ರಾಹಿಂ, ಬಚ್ಚೇಗೌಡರು, ಬಸವರಾಜ ರಾಯರೆಡ್ಡಿ, ಡಿ.ಬಿ ಚಂದ್ರೇಗೌಡರು, ವೈಜ್ಯನಾಥ ಪಾಟೀಲ್, ಎಂ.ಪಿ ಪ್ರಕಾಶ್ , ನಾಣಯ್ಯ, ಸಿದ್ದರಾಮಯ್ಯ, ಚಲುವರಾಯಸ್ವಾಮಿ, ಜಮೀರ್, ಬಾಲಕೃಷ್ಣ, ಚನ್ನಪಟ್ಟಣದ ಮಾನಸ ಪುತ್ರ ವರದೇಗೌಡರು ಹೀಗೆ ಎಷ್ಟು ಜನರನ್ನು ತುಳಿದಿದ್ದೀರಿ. ಈಗ ಈ ಪಟ್ಟಿಯಲ್ಲಿ ಕೊನೆಯ ಹೆಸರು ಸಿ.ಪಿ ಯೋಗೇಶ್ವರ್. ಸಿದ್ದರಾಮಯ್ಯ ಅವರನ್ನೇ ಬಿಡದ ನೀವು ಯೋಗೇಶ್ವರ್ ಅವರನ್ನು ನನ್ನನ್ನು ಸಹಿಸುತ್ತೀರಾ?
ನಿಮ್ಮ ರಾಜಕಾರಣದ ವ್ಯವಸ್ಥೆಯಲ್ಲಿ ನೀವು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಿದ್ದರೆ ಇಂದು ರಾಜ್ಯದಲ್ಲಿ ಅತ್ಯುತ್ತಮ ಪ್ರಾದೇಶಿಕ ಪಕ್ಷ ಅಲ್ಲಾಡಿಸಲು ಸಾಧ್ಯವಾಗಿರುತ್ತಿರಲಿಲ್ಲ. ನಿಮ್ಮ ಮಕ್ಕಳ ಜತೆಗೆ ಬೆಳೆಯುವವರನ್ನು ಒಬ್ಬೊಬ್ಬರಾಗಿ ತುಳಿಯುತ್ತಾ ಬಂದಿರಿ.
ಸಮಾಜದ ಗೌರವಕ್ಕಾಗಿ ದೇವೇಗೌಡರ ಅಪಮಾನ ಸಹಿಸಿಕೊಂಡಿದ್ದೇನೆ:
ಅವರು ಪರಮಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಗಳನ್ನೇ ಬಿಡಲಿಲ್ಲ, ಇನ್ನು ಈ ಸಮಾಜದ ಬೇರೆಯವರನ್ನು ಬಿಡುತ್ತಾರಾ. ಜೆಡಿಎಸ್ ಕಾರ್ಯಕರ್ತರೇ ಜಾತಿ ವ್ಯಾಮೋಹಕ್ಕೆ ಹೋಗಬೇಡಿ. ಯೋಗೇಶ್ವರ್ ಕೂಡ ಒಕ್ಕಲಿಗನೇ. ನಾನು ಒಕ್ಕಲಿಗನೇ. ಬಾಲಕೃಷ್ಣ ಅವರೂ ಒಕ್ಕಲಿಗರೇ. ದೇವೇಗೌಡರು, ಕುಮಾರಸ್ವಾಮಿ ಅವರು ನಮ್ಮನ್ನು ಕಳ್ಳರು, ಸುಳ್ಳರು ಎಂದು ಹೇಳುತ್ತಿದ್ದಾರೆ. ನಾವು ಅವರ ಅಪಮಾನವನ್ನು ಸಹಿಸಿಕೊಳ್ಳುತ್ತಿದ್ದೇನೆ. ಅವರ ಟೀಕೆಗಳಿಗೆ ತೀಕ್ಷ್ಣವಾಗಿ ಉತ್ತರ ಕೊಡಬಲ್ಲೆ. ಆದರೆ ಈ ಸಮಾಜದ ಗೌರವಕ್ಕಾಗಿ ನನ್ನ ಮಾತನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದೇನೆ. ನೆಂಟರಂತೆ ಬಂದವರು ನೆಂಟರಂತೆ ಹೋಗಲಿ, ನಾವು ನಿಮ್ಮ ಋಣ ತೀರಿಸುತ್ತೇವೆ.
ರಾಜ್ಯದಾದ್ಯಂತ ಚನ್ನಪಟ್ಟಣದ್ದೇ ಸದ್ದು:
ಚನ್ನಪಟ್ಟಣದವರು ಇಷ್ಟು ಸದ್ದು ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ರಾಜ್ಯದ ಮೂಲೆ ಮೂಲೆಯಲ್ಲಿ ಚನ್ನಪಟ್ಟಣದ್ದೇ ಸದ್ದು. ಈ ಕ್ಷೇತ್ರದ ಜನ ಈ ಚುನಾವಣೆಯಲ್ಲಿ ಯಾವ ತೀರ್ಪು ನೀಡುತ್ತಾರೆ ಎಂದು ರಾಜ್ಯದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಚನ್ನಪಟ್ಟಣ ಜನರಿಗೆ ಚುನಾವಣೆ ಹಾಗೂ ಉಪಚುನಾವಣೆಗಳು ಹೊಸದಲ್ಲ. ಅನೇಕ ನಾಯಕರುಗಳನ್ನು ನೀವು ನೋಡಿದ್ದೀರಿ. ಅನೇಕರನ್ನು ಆಶೀರ್ವಾದ ಮಾಡಿ ದೊಡ್ಡ ಮಟ್ಟಕ್ಕೆ ಬೆಳೆಸಿದ್ದೀರಿ.
ಆದರೆ ಇಂದು, ನೀವು ಆಶೀರ್ವಾದ ಮಾಡಿ ಬೆಳೆಸಿರುವ ನಾಯಕರುಗಳು ನಿಮಗೆ ಹಾಗೂ ಈ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆಗಳೇನು ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ. ಇವರ ಮಧ್ಯೆ ಈ ತಾಲೂಕಿನಲ್ಲಿ ಹುಟ್ಟಿ, ಈ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿ, ರೈತರನ್ನು ರಕ್ಷಿಸಲು ಶ್ರಮಿಸಿ, ಗೆಲುವು ಸೋಲಿನ ಮಧ್ಯೆ ಇರುವ ಸಿ.ಪಿ ಯೋಗೇಶ್ವರ್ ಅವರು ಇಂದು ಚುನಾವಣೆಗೆ ಸ್ಪರ್ಧಿಸಿದ್ದಾರೆ.
ತಾಲೂಕಿನ ಜನ ಬಹಳ ಬುದ್ದಿವಂತರು, ವಿದ್ಯಾವಂತರು, ಪ್ರಜ್ಞಾವಂತರು. ಹೀಗಾಗಿ ರಾಜ್ಯಕ್ಕೆ ದೊಡ್ಡ ಸಂದೇಶ ನೀಡುತ್ತೀರಿ ಎಂದು ಭಾವಿಸಿದ್ದೇನೆ. ಚನ್ನಪಟ್ಟಣದಲ್ಲಿ 10 ವರ್ಷಗಳ ಹಿಂದೆ ಒಂದು ಮಾತಿತ್ತು. ಸಿ.ಪಿ. ಯೋಗೇಶ್ವರ್ ಶಾಸಕರಾಗಿ ಈ ತಾಲೂಕಿನ ಕೆರೆ ತುಂಬಿಸಿ, ರೈತರ ಬದುಕು ರಕ್ಷಣೆ ಮಾಡಿದ್ದಾರೆ ಎಂದು ಮಾತು ಚರ್ಚೆಯಲ್ಲಿತ್ತು. ಪಕ್ಷಬೇಧ, ಜಾತಿ ಧರ್ಮ ಮರೆತು ಜನ ಯೋಗೇಶ್ವರ್ ಅವರಿಗೆ ಬೆಳ್ಳಿ ಕಿರೀಟ, ಕತ್ತಿ, ಗದೆ ಕೊಟ್ಟು ಸನ್ಮಾನ ಮಾಡಿ, ರಥದಲ್ಲಿ ಮೆರವಣಿಗೆ ಮಾಡಿದರು. ಆಗ ಯೋಗೇಶ್ವರ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಮಾತುಗಳಿದ್ದವು.
ಸುಳ್ಳು ಹೇಳುವುದೇ ಅವರ ಚಾಳಿ:
ಕೆಲವರು ಏನೂ ಮಾಡದೇ, ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಒಂದೊಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಕಾರಣ, ಅದು ಅವರ ವಂಶಕ್ಕೆ ಅಂಟಿಕೊಂಡಿರುವ ಚಾಳಿ. ಜನ ಬೇಗ ಮರೆಯುತ್ತಾರೆ, ಬದಲಾವಣೆ ಬಯಸುತ್ತಾರೆ, ಹೊಸತನ್ನು ಬಯಸುತ್ತಾರೆ ಎಂದು ಅವರು ಭಾವಿಸಿದ್ದಾರೆ. ಕುಮಾರಸ್ವಾಮಿ ಅವರು ಇಲ್ಲಿ ಸ್ಪರ್ಧೆ ಮಾಡಿದಾಗ ಈ ಜನ ಯೋಗೇಶ್ವರ್ ಅವರನ್ನು ಒಮ್ಮೆ ಸೋಲಿಸಿದರು. ನಂತರ ಕುಮಾರಸ್ವಾಮಿ ಅವರು ತಾನು ಸಿಎಂ ಆಗುವುದಾಗಿ ಪ್ರಚಾರ ಮಾಡಿ ಜನರನ್ನು ನಂಬಿಸಿದರು. ಈ ಕಾರಣಕ್ಕೆ ಈ ಕ್ಷೇತ್ರದ ಕೆರೆಗಳನ್ನು ತುಂಬಿಸಿ ಬತ್ತು ಹೋಗಿದ್ದ ಈ ಭಾಗದ ಕೊಳವೆ ಬಾವಿಗಳಿಗೆ ಮತ್ತೆ ಜೀವ ತುಂಬಿದ ಯೋಗೇಶ್ವರ್ ಅವರನ್ನು ಮತ್ತೊಮ್ಮೆ ಸೋಲಿಸಿದರು.
ಈ ಸಂದರ್ಭದಲ್ಲಿ ಜನ ನನ್ನನ್ನು ಸಂಸದನಾಗಿ ಆಯ್ಕೆ ಮಾಡಿದರು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ ನಾವು ಈ ಭಾಗದ ನೀರಾವರಿ ಯೋಜನೆಗೆ ಶಕ್ತಿ ತುಂಬಲು ಜನರಿಗೆ ವಿದ್ಯುತ್ ಪೂರೈಸಿದೆವು. ಹೆಚ್ ವಿಡಿಎಸ್ ಯೋಜನೆಯಲ್ಲಿ ಈ ತಾಲೂಕಿನಲ್ಲಿರುವ 22 ಸಾವಿರ ರೈತ ಕುಟುಂಬಗಳಿಗೆ ಉಚಿತವಾಗಿ ಟ್ರಾನ್ಸ್ ಫಾರ್ಮರ್ಸ್ ಅಳವಡಿಸಲಾಯಿತು. ಇಂತಹ ಕೆಲಸ ಆಗಿರುವುದು ರಾಮನಗರ ಜಿಲ್ಲೆಯಲ್ಲೇ ಹೊರತು ಹಾಸನ ಜಿಲ್ಲೆಯಲ್ಲಿ ಅಲ್ಲ. ಪ್ರಧಾನಮಂತ್ರಿಯಾಗಿದ್ದವರು, ಮಂಡ್ಯದಿಂದ ಸಂಸದರಾಗಿ ಕೇಂದ್ರ ಸಚಿವರಾಗಿರುವವರಿಂದ ಈ ಕೆಲಸ ಸಾಧ್ಯವಾಗಲಿಲ್ಲ. ಈ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿರುವುದು ಸಿದ್ದರಾಮಯ್ಯ ಅವರ ಸರ್ಕಾರ, ಡಿ.ಕೆ. ಶಿವಕುಮಾರ್ ಹಾಗೂ ಯೋಗೇಶ್ವರ್ ಮಾತ್ರ.
ನಿಮ್ಮ ಸೇವೆ ಮಾಡಲು ಅವಕಾಶ ನೀಡಿ
ನನ್ನ ಹಾಗೂ ಡಿ.ಕೆ. ಶಿವಕುಮಾರ್ ಅವರ ಮೇಲಿನ ಕೋಪಕ್ಕೆ ಸಿ.ಪಿ ಯೋಗೇಶ್ವರ್ ಅವರನ್ನು ತಬ್ಬಿಕೊಂಡರು. ನನ್ನನ್ನು ಸಂಸದ ಸ್ಥಾನದಿಂದ ತೆಗೆಯಲು ಮಂಜುನಾಥ್ ಅವರನ್ನು ಕರೆತಂದು ಸಂಸದರನ್ನಾಗಿ ಮಾಡಿದರು. ಇಲ್ಲಿ ಅನ್ಯಾಯ ಆಗಿರುವುದು ಯಾರಿಗೆ? ನೀವು ಯೋಗೇಶ್ವರ್ ಅವರನ್ನು ಎರಡು ಬಾರಿ ಸೋಲಿಸಿದ್ದೀರಿ. ಅವರಿಗೆ ಟಿಕೆಟ್ ನೀಡುವುದಾಗಿ ಜೊತೆಯಲ್ಲಿ ಇಟ್ಟುಕೊಂಡರು. ಅಪ್ಪ ಒಂದು ರೀತಿ ಹೇಳಿದರೆ, ಮಗ ಒಂದು ರೀತಿ ಹೇಳುತ್ತಾ ಬಂದರು. ಇದು ಅವರ ನಾಟಕವಲ್ಲವೇ?
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ನಿಮ್ಮ ಸೇವೆ ಮಾಡಲು ಶಕ್ತಿ ನೀಡಿ. ನಾವೆಲ್ಲರೂ ಈ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಿ ಈ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇವೆ. ಡಿ.ಕೆ. ಶಿವಕುಮಾರ್ ಅವರು ಈಗಾಗಲೇ 500 ಕೋಟಿ ವಿಶೇಷ ಅನುದಾನ ತಂದು ಅಭಿವೃದ್ಧಿ ಕೆಲಸ ಆರಂಭಿಸಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ.
BREAKING: ಉಪ ಚುನಾವಣೆ ಹಿನ್ನಲೆ: ನ.13ರಂದು ರಾಜ್ಯ ಸರ್ಕಾರದಿಂದ ನೌಕರರಿಗೆ ‘ವೇತನ ಸಹಿತ ರಜೆ’ ಘೋಷಿಸಿ ಆದೇಶ
BIG NEWS : ಸೈಬರ್ ವಂಚನೆ ತಡೆಗೆ `TRAI’ನಿಂದ ಮಹತ್ವದ ಕ್ರಮ : ದೇಶಾದ್ಯಂತ 18 ಲಕ್ಷ ಮೊಬೈಲ್ ಸಂಖ್ಯೆ ನಿರ್ಬಂಧ!