ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ಜ್ಯೂಸ್ ಮಾದರಿಯಲ್ಲಿ ಮಾರಾಟವಾಗುತ್ತಿರುವ ‘BuzzBallz’ ಹೆಸರಿನ ತಂಪು ಪಾನೀಯದಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿರುವ ಕುರಿತಾದ ದೂರುಗಳು ರಾಜ್ಯ ಸರ್ಕಾರದ ಗಮನಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ತಕ್ಷಣದ ತನಿಖೆಗೆ ಸೂಚನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿರುವ ಆತಂಕದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, “BuzzBallz ತಂಪು ಪಾನೀಯದ ಕುರಿತು ಕೇಳಿಬಂದಿರುವ ದೂರುಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಪಾನೀಯದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ತಪಾಸಣೆ ನಡೆಸುವಂತೆ ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ,” ಎಂದು ತಿಳಿಸಿದ್ದಾರೆ.
ಜ್ಯೂಸ್ ಮಾದರಿಯ ‘BuzzBallz’ ತಂಪು ಪಾನೀಯದಲ್ಲಿ ವಿಷಕಾರಿ ಅಂಶ ಪತ್ತೆ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಸಂಬಂಧಿಸಿದ ಅಧಿಕಾರಿಗಳಲ್ಲಿ ಸ್ಯಾಂಪಲ್ ಸಂಗ್ರಹಿಸಲು ಸೂಚಿಸುತ್ತೇನೆ. ಗುಣಮಟ್ಟದ ಪರೀಕ್ಷೆಯ ವರದಿ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ. pic.twitter.com/TyNohNwm1G
— DIPR Karnataka (@KarnatakaVarthe) March 5, 2026
ವರದಿ ಆಧರಿಸಿ ಮುಂದಿನ ಕ್ರಮ
ಈ ಪಾನೀಯದಲ್ಲಿ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕ ಅಥವಾ ವಿಷಕಾರಿ ಅಂಶಗಳು ಇವೆಯೇ ಎಂಬುದನ್ನು ಪತ್ತೆಹಚ್ಚಲು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗುತ್ತದೆ. “ಗುಣಮಟ್ಟದ ಪರೀಕ್ಷೆಯ ಅಧಿಕೃತ ವರದಿ ಬಂದ ತಕ್ಷಣ, ಅದರಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಅಂತಹ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವುದು ಸೇರಿದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಸಚಿವರು ಭರವಸೆ ನೀಡಿದ್ದಾರೆ.
ಸಾರ್ವಜನಿಕರಲ್ಲಿ ಜಾಗೃತಿ
ಬೇಸಿಗೆಯ ಬಿಸಿಲೆಂದು ತಂಪು ಪಾನೀಯ ಕುಡಿಯೋ ಮುನ್ನ ಎಚ್ಚರಿಕೆ ವಹಿಸಿ. ವಿಶೇಷವಾಗಿ ಮಕ್ಕಳು ಮತ್ತು ಯುವಜನತೆಯನ್ನು ಆಕರ್ಷಿಸುವ ಇಂತಹ ಪ್ಯಾಕೇಜ್ಡ್ ಪಾನೀಯಗಳ ಬಳಕೆಯ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ಮನವಿ ಮಾಡಿದೆ. ಆಹಾರ ಸುರಕ್ಷತಾ ಗುಣಮಟ್ಟದ ಮಾನದಂಡಗಳನ್ನು ಉಲ್ಲಂಘಿಸುವ ಯಾವುದೇ ಕಂಪನಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
BREAKING: ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ ಆನಂದ್ ಬೋಸ್ ದಿಢೀರ್ ರಾಜೀನಾಮೆ | CV Ananda Bose Resigns
SSLC, PUC ಪಾಸಾಗಲು ಎಷ್ಟು ಅಂಕ ಪಡೆಯಬೇಕು? ಇಲ್ಲಿದೆ ಮಂಡಳಿಯ ಅಧಿಕೃತ ಮಾಹಿತಿ








